Thursday, August 20, 2015

ಒಗ್ಗರಣೆ ದೋಸೆ

ಸಂಜೆಯ ತಿನಿಸಿಗೆ ಇದು ಹೇಳಿ ಮಾಡಿದ್ದು. ಮಕ್ಕಳಿಗೆ ಅಂತೂ ತುಂಬಾ ಇಷ್ಟ ಆಗುತ್ತೆ. ನನ್ನ ತಮ್ಮನ 6 ವರ್ಷದ ಮಗಳು ಹುಳಿ ಬಂದ ತಿನಿಸನ್ನು ತಿನ್ನಲ್ಲ ಉದಾಹರಣೆಗೆ ಇಡ್ಲಿ, ದೋಸೆ ...ಅವಳಿಗೆ ಇಷ್ಟ ಆಗುವ ತಿನಿಸು ಪೂರಿ, ಚಪಾತಿ, ಒತ್ತು ಶ್ಯಾವಿಗೆ, ಮತ್ತು ಈ ವಗ್ಗರಣೆ ದೋಸೆ.
ಇದನ್ನು ಮಾಡುವುದು ತುಂಬಾ ಸುಲಭ
ಬೇಕಾಗಿರುವುದು: 
1 ಕಪ್ ಮೈದಾ, ಅರ್ಧ ಬಟ್ಟಲು ಮೊಸರು, ಒಂದು ದೊಡ್ಡ ಚಮಚ ತಾಜಾ ಕಾಯಿ ತುರಿ, ಎರಡು ಹಸಿ ಮೆಣಸಿನ ಕಾಯಿ (ಜಜ್ಜಿದ್ದು), ಒಂದು ದೊಡ್ಡ ಚಮಚ ಸಕ್ಕರೆ, ರುಚಿಗೆ ತಕ್ಕಷ್ಟು ಉಪ್ಪು. ಇವೆಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿ. ಹಿಟ್ಟನ್ನು ಮಾಮೂಲಿ ದೋಸೆ ಹಿಟ್ಟಿಗಿಂತ ತೆಳು, ನೀರು ದೋಸೆಗಿಂತ ಸ್ವಲ್ಪ ದಪ್ಪ- ಮಾಡಿ. ಇದಕ್ಕೆ ಸಾಸಿವೆ, ಕರಿಬೇವಿನ ಒಗ್ಗರಣೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಆಮೇಲೆ ಬಿಸಿ ಕಾವಲಿಯ ಮೇಲೆ ತೆಳ್ಳಗಿನ ದೋಸೆ ಹುಯ್ಯಿರಿ. ದೋಸೆ ಬೇಯಿಸುವಾಗ ಹೆಚ್ಚು ಎಣ್ಣೆ ಹಾಕಬೇಕೆಂದಿಲ್ಲ. ಯಾಕಂದರೆ ಕಾಯಿ ತುರಿ ಮತ್ತು ಮೊಸರು + ಒಗ್ಗರಣೆಯ ಎಣ್ಣೆ ಇದೆಯಲ್ಲ?? ಆರಾಮಾಗಿ ನಾಲ್ಕೈದು ದೋಸೆ ಮಾಡಬಹುದು.
ಗಮನಿಸ ಬೇಕಾದ ಅಂಶ: ಸಕ್ಕರೆ ಮತ್ತು ಉಪ್ಪಿನ ಪ್ರಮಾಣ ಸರಿಯಾಗಿರಬೇಕು, ಆಗಲೇ ಈ ದೋಸೆಗೆ ರುಚಿ. ಗರಿಗರಿ ಅಥವಾ ಮೆತ್ತನೆ ದೋಸೆ ನಿಮ್ಮಿಷ್ಟ...

ಹಾಗೆ ತಿನ್ನಬಹುದು ಅಥವಾ ಬೆಣ್ಣೆ/ಸಾಂಬಾರ್/ಚಟ್ನಿ ಪುಡಿಯೊಂದಿಗೆ

ಎಂಜಾಯ್
:-)

No comments: