Tuesday, February 10, 2015

ವಲ್ ವಲ್ / ತರಕಾರಿ ಕಾಯಿ ರಸ

ನಮ್ಮ ಮನೆಯಲ್ಲಿ ಈ ತಣ್ಣಗಿನ ಪದಾರ್ಥ  hot favorite. ನಿಮಗೆ ಬೇಕಾದ ತರಕಾರಿ ಬಳಸಬಹುದು. 
ಸಾಧಾರಣವಾಗಿ ಚೌತಿ ಹಬ್ಬದ ನಂತರ ಈ ವಲ್ ವಲ್ ಮಾಡುತ್ತಾರೆ ನಮ್ಮಲ್ಲಿ. ಚೌತಿಗೆ ಗಣಪ ಇರಿಸುವವರು, ಮಂಟಪದಲ್ಲಿ ಆ ಕಾಲಕ್ಕೆ ಸಿಗುವ ತರಕಾರಿ ಹಣ್ಣು ಹಂಪಲುಗಳನ್ನು ’ಫಲಾವಳಿ’ ಅಂತ ನೇತು ಹಾಕುತ್ತಾರೆ. ಅದಕ್ಕೆ ಸೂಜಿ ದಾರದ ಉಪಯೋಗ ಮಾಡುತ್ತಾರಾದ್ದರಿಂದ ಅದು ತುಂಬ ಸಮಯ ಇಡಲಾಗುವುದಿಲ್ಲ. ನಾಲ್ಕಾಲ್ಕೆ ತರಕಾರಿ ಗಳನ್ನು ಈ ಫಲಾವಳಿಯಲ್ಲಿ ಉಪಯೋಗಿಸ್ತಾರೆ ಆದ್ದರಿಂದ, ಆ ತರ್ಕಾರಿಗಳ ಮಿಶ್ರ ಅಡುಗೆಯನ್ನು ( ಅವನ್ನು ಬೇಗ ಖಾಲಿಮಾಡಲೋಸುಗ) ವಲ್ ವಲ್ ಅಥವ ಗಜಬಜೆ (ಅದು ಬೇರೆ ಪೋಸ್ಟ್ ನಲ್ಲಿ ಹಾಕ್ತೇನೆ) ಮಾಡುವ ಪರಿಪಾಠ. ನಮ್ಮ ಮನೆಯಲ್ಲಿ ಫ್ರಿಜ್ ನಲ್ಲಿ ಅಲ್ಪ ಸ್ವಲ್ಪ ಉಳಿದ ತರಕಾರಿಯಿದ್ದರೆ ನಾನು ಗಜಬಜೆ ಗಿಂತ ಹೆಚ್ಚು ವಲ್ ವಲ್ ಇಷ್ಟ ಆದ್ದರಿಂದ ಅದನ್ನೇ ಮಾಡುತ್ತೇನೆ.
ಒಬ್ಬ ಪರಿಚಯದವರು ನಮ್ಮ ಮನೆಗೆ ವಲ್ ವಲ್ ಮಾಡಿದಾಗ ಬಂದಿದ್ದರು. ಹೆಚ್ಚಿನದಾಗಿ ಕಾಯಿ ರಸ ಹಾಕಿ ಮಾಡಿದ ಪದಾರ್ಥ ಎಲ್ಲರಿಗೂ ಇಷ್ಟ. ಊಟಕ್ಕೆ ಅವರಿಗೆ ಔತಣ ಕೊಟ್ಟಿದ್ದರಿಂದ ವಲ್ ವಲ್ ಹಾಗೂ ಇತರೇ ಅಡಿಗೆಗಳೂ ಇದ್ದವು. ಅವರು ವಲ್ ವಲ್ ಒಂದು ಬಿಟ್ಟು ಎಲ್ಲ ಬಡಿಸಿ ಎಂದಾಗ, ಅಡಿಗೆ ಮನೆಯಲ್ಲಿ ಬಾಳಕಾ (ಮಜ್ಜಿಗೆಯಲ್ಲಿ ಅದ್ದಿ ಒಣಗಿಸಿದ ಹಸಿಮೆಣಸು) ಎಣ್ಣೆಯಲ್ಲಿ ಕರಿಯುತ್ತಿದ್ದವಳು..ವ್ಹಾssssಟ್ how can anybody not love ವಲ್ ವಲ್ ಅಂತ ಛಾವಣಿ ಕಡೆ (rolling her eyes) ನೋಡ್ತಾ ಇದ್ದಳು.
ಅವರಿಗೆ ನಾನು ಕುಶಾಲಿನಲ್ಲಿ ಯಾಕಿಷ್ಟ ಇಲ್ಲ ಅಂತ ಕೇಳಿದೆ. ಅದಕ್ಕೆ ಅವರು ...’ಮಾಯಿ, ಊರಲ್ಲಿ ನಮಗಿರೋದು ತರಕಾರಿ ಅಂಗಡಿ. ಅರ್ಧ ಕೊಳೆತ ತರಕಾರಿಯಲ್ಲಿನ ಒಳ್ಳೆಯ ಭಾಗ ತೆಗೆದು ನಮ್ಮ ಮನೆಯಲ್ಲಿ ದಿನಾ ವಲ್ ವಲ್ ಮಾಡ್ತಾರೆ. ತಿಂದು ತಿಂದು ಬೇಜಾರ್ ಆಗಿದೆ. ನನಗೆ ದಾಳಿತೊವ್ವೆ ಒಂದಿದ್ದರೆ ಸಾಕಪ್ಪ’ ಅಂತ ಹೇಳಿದರು :-)
ನಾನು ಇದರಲ್ಲಿ: ಬೀನ್ಸ್, ಕ್ಯಾರೆಟ್, ಸೌತೆಕಾಯಿ, ತೊಂಡೆಕಾಯಿ, ಬಾಳೆಕಾಯಿ, ದಪ್ಪಮೆಣಸು ಸೇರಿಸಿದ್ದೇನೆ.

ಬೇಕಾಗಿರುವುದು: ನಿಮಗೆ ಬೇಕಾದ ನಾಲ್ಕೈದು ತರಕಾರಿಗಳು, ನಾಲ್ಕೈದು ಹಸಿಮೆಣಸಿನಕಾಯಿ, ಒಂದು ತೆಂಗಿನಕಾಯಿ (ಹೆರೆದು ಹಾಲು ತೆಗೆದಿಟ್ಟುಕೊಳ್ಳಿ), ಒಗ್ಗರಣೆಗೆ ಎಣ್ಣೆ, ಸಾಸಿವೆ, ಜೀರಿಗೆ, ಕೆಂಪು ಒಣ ಮೆಣಸು, ಉಪ್ಪು, ಒಂದು ಚಮಚ ಅಕ್ಕಿ ಹಿಟ್ಟು
ತರಕಾರಿಗಳಿಗೆ ಸ್ವಲ್ಪ ನೀರು ಸೇರಿಸಿ, ಸೀಳಿದ ಹಸಿಮೆಣಸಿನಕಾಯಿ, ಉಪ್ಪು ಬೆರೆಸಿ ಕುಕ್ಕರ್ ನಲ್ಲಿ ಎರಡು ಸೀಟಿ ಕೂಗಿಸಿ ಆಫ್ ಮಾಡಿ.
ತಣ್ಣಗಾದ ಮೇಲೆ ಒಂದು ಕುದಿ ಬರುವಷ್ಟು ಬಿಸಿ ಮಾಡಿ. ಅರ್ಧ ಗ್ಲಾಸ್ ನೀರಿನಲ್ಲಿ ಅಕ್ಕಿ ಹಿಟ್ಟನ್ನು ಗಂಟು ಬರದಂತೆ ಕದಡಿಸಿ. ಅದನ್ನು ಕುದಿ ಬರುತ್ತಿರುವಾಗ ಬೆರೆಸಿ ಬಿಡಿ. ಒಗ್ಗರಣೆ ಹಾಕಿ. (ತೆಂಗಿನಹಾಲು ಮತ್ತು ಬೆಂದ ತರಕಾರಿಗಳನ್ನು ಹಿಡಿದಿಟ್ಟುಕೊಳ್ಳುವುದು ಅಕ್ಕಿ ಹಿಟ್ಟಿನ ಕಾರ್ಯ.) ಊಟಕ್ಕೆ ಬಡಿಸುವ ಮುನ್ನ ತೆಂಗಿನ ಹಾಲು ಬೆರೆಸಿ ಸ್ವಲ್ಪ ಬಿಸಿ ಮಾಡಿ. 
ವಲ್ ವಲ್ ತಯಾರು. 
ಸೂಪ್ ತರಹ ಹಾಗೆ ಸೇವಿಸಬಹುದು, ಅಥವಾ ಅನ್ನ ಕ್ಕೆ ಸಾಥ್...ಎರಡೂ ಟೇಸ್ಟಿ. ಎರಡು ತುತ್ತು ಹೆಚ್ಚು ಉಂಡರೂ (ಹೆವಿ )ಭಾರ ಅನಿಸಲ್ಲ. 


ಅನ್ನ, ವಲ್ ವಲ್ ಮತ್ತು ಕೋಕಂ (ಸೋಲ್ ಕಡಿ)
ನಾನು ವೀಕ್ ಡೇ ನಲ್ಲಿ ಇದನ್ನು ತಯಾರಿಸಿದರೆ, ನನ್ನ ಸಣ್ಣ ಮಗಳು ’momee you should prepare this on my day off (ಭಾನುವಾರ ಆಕೆಗೆ ರಜೆ), ಆಗ ಆರಾಮಾಗಿ ಎಂಜಾಯಿಸುತ್ತ ಊಟ ಮಾಡಬಹುದ” ಅಂತ. 
ವಲ್ ವಲ್ ಗೆ ಸುವರ್ಣಗೆಡ್ಡೆ, ಅಲಸಂದೆ, ಹೀರೆಕಾಯಿ, ಆಲೂಗಡ್ಡೆ ಕೂಡ ಬೆರೆಸಬಹುದು.
:-)