Monday, September 21, 2015

ಕೆಸುವಿನ ಗೆಡ್ಡೆಯ ಬೊಡ್ಕೊ

ಹೆಸರು ಒಂತರಹ ವಿಚಿತ್ರವಾಗಿದೆಯಲ್ಲಾ?? ಅಮ್ಮ ಇಟ್ಟಿದ್ದ ಹೆಸರೋ ಅಥವಾ ಅದರ ಹೆಸರು ಹಾಗೆಯೋ ಗೊತ್ತಿಲ್ಲ. ಯಾಕೆ ಹಾಗೆ ಹೇಳಿದೆಯಂದ್ರೆ, ಕೊಂಕಣಿಯಲ್ಲಿ ಬೊಡ್ಕೊ ಅಂದ್ರೆ ತಲೆಗೆ ಬದಲಾಗಿ ಉಪಯೋಗಿಸುವ slang....ಮಂಡೆ ಸರಿಯಿಲ್ಲವಾ ಅಂತ ಕೇಳ್ತಾರಲ್ಲವಾ? ಹಾಗೆ ಬೊಡ್ಕೊ ಸಮ್ಮ ನಾ ಅಂತಾರೆ ಕೊಂಕಣಿಯಲ್ಲಿ. ಹೆಸರು ಹೇಗೇ ಇರಲಿ ತಿನ್ನಲಿಕ್ಕಂತೂ ಟೇಸ್ಟಿ. :-) ಬೇಕಾದ್ರೆ ಕೆಸುವಿನ ಗೆಡ್ಡೆಯ preparation ಅಥವಾ ಕೆಸುವಿನ ಗೆಡ್ಡೆಯ ಪದಾರ್ಥ ಅಂತ ಹೆಸರಿಡಬಹುದು. ಅರೇ ಇದೇನಿದು? ಪಾಕಕ್ಕಿಂತ ಪುರಾಣನೇ ಜಾಸ್ತಿಯಾಯ್ತು....:-)
ಮಾಡುವ ವಿಧಾನ: ಕೆಸುವಿನ ಗೆಡ್ಡೆಗಳನ್ನು ಚೆನ್ನಾಗಿ ತೊಳೆದು (ಅರ್ಧ ಗಂಟೆ ನೀರಲ್ಲಿ ನೆನೆಸಿಟ್ರೂ ನಡೀತದೆ) ಕುಕ್ಕರ್ ನಲ್ಲಿ ಬೇಯಿಸಿ. ತಣಿದ ನಂತರ ಸಿಪ್ಪೆ ಸುಲಿದಿಡಿ. ಗಾತ್ರ ಚಿಕ್ಕದಾದರೆ ಮುಳ್ಳು ಚಮಚ -fork ನಿಂದ ಚುಚ್ಚಿ. ಗೆಡ್ಡೆಯ ಗಾತ್ರ ದೊಡ್ಡದಿದ್ದರೆ ಕಟ್ ಮಾಡಿ.
ಒಗ್ಗರಣೆಗೆ ಸ್ವಲ್ಪ ಹೆಚ್ಚೇ ಎಣ್ನೆ ಬಿಸಿ ಮಾಡಲು ಇಡಿ. ಇದಕ್ಕೆ ಜೀರಿಗೆ, ಸಾಸಿವೆ, ಹಿಂಗು, ಕಾರದ ಪುಡಿ, ಅರಸಿನ ಪುಡಿ, ಹುಣಸೆ ನೀರು ಅಥವಾ ಆಮ್ ಚೂರ್ ಪೌಡರ್ (ಕ್ರಮವಾಗಿ) ಹಾಕಿ. ಗೆಡ್ಡೆಗಳನ್ನು ಬೆರೆಸಿ ಉಪ್ಪು ಹಾಕಿ 5 ನಿಮಿಷ ಮುಚ್ಚಿಡಿ. ಆ ಮೇಲೆ ಒಂದು ಟೇಬಲ್ ಸ್ಪೂನ್ ಅಕ್ಕಿ ಹಿಟ್ಟು ಉದುರಿಸಿ (ಅದು ಎಲ್ಲ ಗೆಡ್ಡೆಗಳನ್ನು ಕೋಟ್ (coat) ಆಗುವಂತೆ ನೋಡಿಕೊಳ್ಳಿ) 5 ನಿಮಿಷ ಬೇಯಿಸಿ. ಅಷ್ಟೆ. ಬಿಸಿ ಅನ್ನ, ಚಪಾತಿಗೆ ಒಳ್ಳೆಯ ಸೈಡ್ ಡಿಶ್.









Friday, September 4, 2015

ಕೆಸುವಿನೆಲೆಯ ಆಳ್ವತಿ

ಇದು ಮಲೆನಾಡಿನ especially ಕೊಂಕಣಿಯವರ specialty. ನಾನು ಮದುವೆಯಾಗಿ ತೀರ್ಥಹಳ್ಳಿಗೆ ಬಂದ ಮೇಲೆ ಈ ಅಡಿಗೆಯನ್ನು ಕಲಿತಿದ್ದು. ಅಮ್ಮನಿಗೂ ಇದರ ರುಚಿ ಹತ್ತಿಸಿದ್ದೇನೆ.

ಬೇಕಾಗಿರುವುದು : ಒಂದು ಕಟ್ಟು(8-10) ಸಣ್ಣ ಕೆಸುವಿನ ಎಲೆಗಳು, ಮೂರು ಆಮ್ಟೆ ಕಾಯಿ (hog plum), ಅರ್ಧ ಹಿಡಿ ಕಡಲೆ (ನೆನೆಸಿದ್ದು), ಮೂರು-ನಾಲ್ಕು ಹಸಿಮೆಣಸಿನಕಾಯಿ, ಕಾಲು ಇಂಚ್ ಶುಂಠಿ, ಒಂದು ದೊಡ್ಡ ಚಮಚ ಕಾಯಿ ತುರಿ, ಉಪ್ಪು, ಒಂದು ಲಿಂಬೆ ಹಣ್ಣಿನ ರಸ, ಒಂದು ಟೀ ಚಮಚ ಶುಧ್ಧ ತೆಂಗಿನ ಎಣ್ಣೆ


ವಿಧಾನ:
ಕಡಲೆ ಕಾಳು ಕುಕ್ಕರ್ ನಲ್ಲಿ ಬೆಯಿಸಿಡಿ. ಕೆಸುವಿನ ಎಲೆಗಳನ್ನು ಚೆನ್ನಾಗಿ ತೊಳೆದು, ನಾರು ತೆಗೆದು, ಸಣ್ಣಕ್ಕೆ ಕತ್ತರಿಸಿ, ಅಮಟೆ ಕಾಯಿ ಗುದ್ದಿ ಎರಡನ್ನೂ ನೀರು ಹಾಕಿ ಬೇಯಿಸಲು ಇಡಿ. ಇದಕ್ಕೆ ಸೀಳಿದ ಮೆಣಸಿನಕಾಯಿ ಮತ್ತು ಉಪ್ಪು ಹಾಕಿ ಮುಚ್ಚಿಡಿ. ಬೆಂದ ಮೇಲೆ ಗ್ಯಾಸ್ ಆಫ್ ಮಾಡಿ. ತಣಿದ ಮೇಲೆ ಅದರಿಂದ ಬೆಂದ ಹಸಿಮೆಣಸಿನಕಾಯಿ ಹೆಕ್ಕಿ ತೆಂಗಿನಕಾಯಿಯೊಂದಿಗೆ ಚೆನ್ನಾಗಿ ರುಬ್ಬಿ ಬೆಂದ ಎಲೆಯ ಜತೆ ಮಿಶ್ರಣ ಮಾಡಿ. ಇದಕ್ಕೆ ಬೇಯಿಸಿಟ್ಟ ಕಡಲೆ ಮಿಕ್ಸ್ ಮಾಡಿ ಎಷ್ಟು ಬೇಕೋ ಅಷ್ಟು ನೀರು ಹಾಕಿ, ಉಪ್ಪು ರುಚಿ ನೋಡಿ ಬೇಕಿದ್ದಲ್ಲಿ ಉಪ್ಪು ಹಾಕಿ, ಶುಂಠಿಯನ್ನು ಚಿಕ್ಕದಾಗಿ ಕತ್ತರಿಸಿ ಹಾಕಿ. ಸರಿ ಕುದಿ ಬಂದ ಮೇಲೆ ಗ್ಯಾಸ್ ಆಫ್ ಮಾಡಿ. ತೆಂಗಿನ ಎಣ್ಣೆ ಸುರಿಸಿ ಮುಚ್ಚಿಡಿ. ಬಡಿಸುವ ಮುಂಚೆ ಲಿಂಬೆ ರಸ ಬೆರೆಸಿ. ಬಿಸಿ ಬಿಸಿ ಅನ್ನದ ಜತೆ ಸೆರ್ವ್ ಮಾಡಿ.