Tuesday, November 19, 2013

ಮನೆಯಲ್ಲೇ ತಯಾರಿಸಿದ ಪಾವ್ ಮತ್ತು ಜತೆಗೆ ಭಾಜಿ ಮಾಡುವ ವಿಧಾನ

ಮೈದಾ ಹಿಟ್ಟು - 200 ಗ್ರಾಂ (ನಾವು ಅರ್ಧ ಮೈದ ಅರ್ಧ ಗೋದಿ ಹಿಟ್ಟು ಹಾಕುವುದು)
ಯೀಸ್ಟ್ - 6 ಗ್ರಾಂ  (ಫ್ರೆಶ್ ಇದ್ದಷ್ಟು  ಒಳ್ಳೇದು)
ಉಪ್ಪು - 4ಗ್ರಾಂ
ಸಕ್ಕರೆ - 10 ಗ್ರಾಂ
ಬೆಣ್ಣೆ - 10 ಗ್ರಾಂ
ಓಲಿವ್ ಎಣ್ಣೆ - 5 ಮಿ ಲಿ (ಅಥವಾ ರಿಫೈನ್ಡ್ ಎಣ್ಣೆ ಕೂಡ ಆಗುತ್ತೆ)
(ಮೆಶರಿಂಗ್ ಕಪ್ ಇದ್ದರೆ ಒಳ್ಳೆಯದು)

ಯೀಸ್ಟ್ ಅನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಹಾಕಿ. ಅದು ನೊರೆನೊರೆಯಾಗುತ್ತೆ. ಉಳಿದ ಎಲ್ಲ ಪದಾರ್ಥಗಳನ್ನು ಯೀಸ್ಟ್ ಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಬೇಕಾದಷ್ಟು ನೀರು ಹಾಕಿ ಅತ್ಯಂತ ಮೃದುವಾದ ಕಣಕ ತಯಾರಿಸಿ. ಈ ಕಣಕಕ್ಕೆ ಎಣ್ಣೆ ಸವರಿ ಒಂದು ಗಂಟೆ ಇಡಿ. ಕಣಕ ಉಬ್ಬಿ ದುಪ್ಪಟ್ಟು ಆಗುತ್ತೆ.
ಇದು ದುಪ್ಪಟ್ಟು ಆಗಿರುವ ಹಿಟ್ಟು. ಕಲಸಿದ ಕೂಡಲೇ ಫೋಟಿ ತೆಗೀಲಿಕ್ಕೆ ಮರೆತು ಹೋಯಿತು.

 ಈಗ ನಿಮಗೆ ಬೇಕಾದ ಆಕಾರ ಸೈಜ್ ನ ಪಾವ್ ತಯಾರಿಸಿ.
ಹೀಗೆ ಒಮ್ದರ ಬಳಿ ಒಂದು ಹಿಟ್ಟಿನ ಉಂಡೆ ಇಡಿ. ಸ್ವಲ್ಪ ಹೊತ್ತಿನ ಬಳಿಕ ಅದು ಕೆಳಗಿನ ಚಿತ್ರದಲ್ಲಿದ್ದಂತೆ ಆಗುತ್ತೆ.

 ಈ ಪಾವ್ ಗಳು ಪುನ: ದುಪ್ಪಟ್ಟು ಸೈಜ್ ಆಗಿ ಉಬ್ಬುತ್ತವೆ. ಆಗ ಓವನ್ ನಲ್ಲಿ 250*C ಯಲ್ಲಿಟ್ಟು ಮೇಲಿನ ಪದರ ಹೊಂಬಣ್ಣಕ್ಕೆ ಬರುವ ತನಕ ಬೇಕ್ ಮಾಡಿ.
ಮನೆಯಲ್ಲಿ ಮೂರು ನಾಲ್ಕು ಬಾರಿ ಈ ಪಾವ್ ನ್ನು ಮಾಡಿ ಆಯ್ತು. ಮೇಲಿನ ಅಳತೆ ಪರ್ಫೆಕ್ಟ್ ಆಗಿದೆ. ಪಾವ್ ತಯಾರಾಗುವಾಗಿನ ಘಮ..ಆಆಆಆಹ್!!! :-)
ಪಾವ್ ಜತೆ ಭಾಜಿ ಮಾಡುವ ವಿಧಾನ ಕೂಡ ಹೇಳಿ ಬಿಡುತ್ತೇನೆ
ಬೇಯಿಸಿದ ತರಕಾರಿ = ಕ್ಯಾರೆಟ್, ಆಲೂಗಡ್ಡೆ, ಬಟಾಣಿ (ಫ್ರೆಶ್ ಬಟಾಣಿ ಇಲ್ಲದಿದ್ದಲ್ಲಿ , ಕಾಳುಗಳನ್ನು ರಾತ್ರಿ ನೆ ನೀರಲ್ಲಿ ನೆನೆಹಾಕಿ. ಬೆಳಿಗ್ಗೆ ಎಲ್ಲವನ್ನು ಚೆನ್ನಾಗಿ ಬೇಯಿಸಿ, ಮ್ಯಾಶ್ ಮಾಡಿಡಿ.
ನೀರುಳ್ಳಿ - ಹದ ಗಾತ್ರದ್ದು 4
ಬೆಳ್ಳುಳ್ಳಿ- 15
ಟೋಮೇಟೊ - ತುಂಬಾ ಮಾಗಿದ್ದು ಒಂದು
ಕೆಂಪು ಮೆಣಸಿನ ಪುಡಿ - 2 ಟೀ ಸ್ಫೂನ್
ಎವರೆಸ್ಟ್ ಪಾವ್ ಭಾಜಿ ಮಸಾಲಾ - ಎರಡು ದೊಡ್ಡ ಟೇಬಲ್ ಸ್ಪೂನ್
ಕೊತ್ತಂಬರಿ ಸೊಪ್ಪು, ಸಣ್ಣಕ್ಕೆ ಕತ್ತರಿಸಿದ ನೀರುಳ್ಳಿ, ಲಿಂಬೆ ಹಣ್ಣಿನ ಸ್ಲೈಸ್ ಮೇಲೆ ಉದುರಿಸಲು. ಸ್ವಲ್ಪ ಬೆಣ್ಣೆ.

ಮೊದಲಿಗೆ ನೀರುಳ್ಳಿ, ಬೆಳ್ಳುಳ್ಳಿಯನ್ನು ಯನ್ನು ಚಿಕ್ಕದಾಗಿ ಕತ್ತರಿಸಿಡಿ. ಸ್ವಲ್ಪ ಹೆಚ್ಚೆ ಎಣ್ಣೆ ಬಿಸಿಮಾಡಲು ಇಡಿ. ಎಣ್ಣೆ ಬಿಸಿಯಾದ ನಂತರ ಇದಾಕೆ ನೀರುಳ್ಳಿ ಬೆರೆಸಿ ಪಿಂಕ್ ಬಣ್ಣ ಆಗುವ ತನಕ ಹುರಿಯಿರಿ. ಇದಕ್ಕೆ ಬೆಳ್ಳುಳ್ಳು ಬೆರೆಸಿ. ಎರಡು ನಿಮಿಷ ಹುರಿದು ಕ್ರಮವಾಗಿ ಮೆಣಸಿನ ಪುಡಿ, ಪಾವ್ ಭಾಜಿ ಮಸಾಲಾ ನಂತರ ಟೋಮೇಟೋ ಬೆರೆಸಿ. ಎಣ್ಣೆ ಬಿಡುವ ಹಂತಕ್ಕೆ ಬಂದಾಗ ಮ್ಯಾಶ್ ಮಾಡಿಟ್ಟ ತರಕಾರಿ ಬೆರೆಸಿ. ಎಷ್ಟು ಬೇಕೋ ಅಷ್ಟು ನೀರು ಸೇರೆಸಿ. ಉಪ್ಪು ಚಿಟಿಕೆ ಸಕ್ಕರೆ ಬೆರೆಸಿ.  ಚೆನ್ನಾಗಿ ಕುದಿ ಬಂದ ನಂತರ ಒಂದು ಸ್ಪೂನ್ ಬೆಣ್ಣೆ, ಕೊತ್ತಂಬರಿ ಸೊಪ್ಪು ಮೇಲಿನಿಂದ ಭಾಜಿಗೆ ಹಾಕಿ.
ಸರ್ವ್ ಮಾಡುವ ಮುನ್ನ ಪಾವ್ ಅನ್ನು ಮಧ್ಯಕ್ಕೆ ಕತ್ತರಿಸಿ ಬೆಣ್ಣೆ ಹಚ್ಚಿ ಕಾವಲಿ ಮೇಲೆ ಬಿಸಿ ಮಾಡಿ, ಭಾಜಿ, ನೀರುಳ್ಳಿ ಕೊತ್ತಂಬರಿ ಸೊಪ್ಪು, ನಿಂಬೆ ಹಣ್ಣಿನ ಜತೆ ಬಡಿಸಿ.

ಮೊದಲ ಸಲ ಪಾವ್ ಮಾಡಿದಾಗ ಶ್ರೀಕಾಂತ್ ರ್ ಪ್ರೆಂಡ್ ಒಬ್ಬರು ಮಡಿಕೇರಿಯಿಂದ ಬಂದಿದ್ದರು. ಕಾಫಿ ಕುಡಿಯುವ ಅಂತ ಅವರು ಬಂದಿದ್ದು.. ಅದರೊಂದಿಗೆ ಬಿಸಿ ಪಾವ್ ಮತ್ತು ಅಮುಲ್ ಬಟರ್ ಕೂಡ ಸೆರ್ವ್ ಮಾಡಿದ್ದು ಅವರಿಗೆ ಸಿಕ್ಕಾಪಟ್ಟೆ ಖುಶಿ ಆಗಿತ್ತು. ಅದೂ ಮನೆಯಲ್ಲೇ ಮಾಡಿದ, ಮೊಟ್ಟೆಯಿಲ್ಲದ ಪಾವ್ ಅಂತ. ಈಗಲೂ ಸಿಕ್ಕಾಗಲೆಲ್ಲ ಅದರ ಬಗ್ಗೆ ಮೆನ್ಷನ್ ಮಾಡ್ತಾರೆ.
ನಮ್ಮ ಮುಂದಿನ ಪ್ರಯೋಗ ರಾಗಿಯಿಂದ ಬ್ರೆಡ್/ಪಾವ್ ತಾಯಾರಿಸುವುದು
:-)