Friday, July 24, 2015

ಖಾರದ ಕಡುಬು- ಕ್ಯಾಬೆಜ್ ಸೇರಿಸಿದ್ದು

ಯಾಹೂssss ಇದು ನನ್ನ 100 ನೇ ಪೋಸ್ಟ್ ಇಲ್ಲಿ...:-) :-)
ಅಕ್ಕಿಯನ್ನು ಎರಡು ಗಂಟೆ ನೆನೆಹಾಕಿ . ಅಕ್ಕಿ ರವೆ ಇದ್ದರೆ ಅದನ್ನೇ ಬಳಸ ಬಹುದು. ಕಾಯಿ ತುರಿ+ಹುರಿದ ಕೆಂಪು ಮೆಣಸು+ಹುಣಸೆ ಹಣ್ಣು ಹಾಕಿ ನುಣ್ಣಗೆ ರುಬ್ಬಿ. ಇದಕ್ಕೆ ಅಕ್ಕಿ ಬೆರೆಸಿ ಅದು ರವೆ ರವೆ ಯಾಗುವಷ್ಟು ಮಿಕ್ಸಿಯಲ್ಲಿ ತಿರುವಿ. ಉಪ್ಪು ಬೆಲ್ಲ ಹಿಂಗು ಸೇರಿಸಿ. ಕ್ಯಾಬೆಜ್ ಸಣ್ಣಕೆ ಕತ್ತರಿಸಿ ಮಿಶ್ರಣಕ್ಕೆ ಬೆರೆಸಿ. ಒಂದು ಪಾತ್ರೆಯ ತಳಕ್ಕೆ ತೆಂಗಿನ ಎಣ್ಣೆ ಹಚ್ಚಿ. ಅದರಲ್ಲಿ ಈ ಮಿಶ್ರಣ ಹಾಕಿ. ಮಿಶ್ರಣೆ ಹೆಚ್ಚು ನೀರಾಗಿರಬಾರದು. ಹಬೆ ಪಾತ್ರೆಯಲ್ಲಿ 20 ನಿಮಿಷ ಬೇಯಿಸಿ.ಬಿಸಿ ಕಡುಬಿನ ಮೇಲೆ ತೆಂಗಿನ ಎಣ್ಣೆ ಸುರುವಿ ಸರ್ವ್ ಮಾಡಿ.  ಅನ್ನ ಸಾರು ಅಥವಾ ದಾಳಿ ತೊವ್ವೆಯೊಂದಿಗೆ ಸೂಪರ್ ಕಾಂಬಿನೇಷನ್.


Tuesday, July 21, 2015

ನೆಲ್ಲಿಕಾಯಿ ಸಾರು

ಈ ಸಲ ಬೆಂಗಳೂರಿನಲ್ಲಿ ಡೆಂಗೆ ಜ್ವರ, ಚಿಕೂನ್ ಗುನ್ಯಾ ಮತ್ತು ಹೊಸ ವೈರಸ್ ನದ್ದೆ ಸದ್ದು ಗದ್ದಲ. ಆದಷ್ಟು ಹೊರಗಡೆ ತಿನ್ನ ಬೇಡಿ. ಉಪಾಯವಿಲ್ಲದೆ ಹೊರಗಡೆ ತಿನ್ನಲೇ ಬೇಕಾದರೆ (ಆಫಿಸ್ ಟೂರ್ etc) ಬಿಸಿ ಪದಾರ್ಥಗಳನ್ನು ಸೇವಿಸಿ. ಚ್ಯಾಟ್ ಮುಂತಾದಲ್ಲಾ ಒಂದೆರಡು ತಿಂಗಳು ತಿನ್ನದಿದ್ದರೆ ಆಕಾಶ ಕಳಚಿ ಬೀಳಲ್ಲ (ನನ್ನ ಮಕ್ಕಳಿಗೆ , ರಾಯರಿಗೆ ನಾನು ಹೀಗೆ ಧಮಕಿ ಹಾಕೋದು)..:-)
ಈ ಮಳೆಯಿಂದ ಆಗುವ ಚಳಿಗೆ, ಚಳಿಗಾಳಿಗೆ ನೆಲ್ಲಿಕಾಯಿ ಸಾರು ಸೂಪರ್. ಒಂದು ಇದರಲ್ಲಿರುವ ಭರಪೂರ ವಿಟಮಿನ್ ’ಸಿ’ ಅಂಶ ನಮ್ಮ ದೇಹಕ್ಕೆ ರೋಗಗಳಿಂದ ಇಮ್ಮುನಿಟಿ (immunity) ನೀಡುತ್ತದೆ. ಅಲ್ಲದೇ ನಾಲಿಗೆಗೂ ರುಚಿಯಾಗಿರುತ್ತೆ.
ಮಾಡುವ ವಿಧಾನ
ಮೂರು ನೆಲ್ಲಿಕಾಯಿ, ಒಂದು ದೊಡ್ಡ ಚಮಚ ಕಾಯಿ ತುರಿ, ಖಾರ ಬೇಕಾದಷ್ಟು ಹಸಿಮೆಣಸಿನ ಕಾಯಿ (ಇದರ ಬದಲಿಗೆ ಕಾಳು ಮೆಣಸು ಕೂಡ ಬಳಸಬಹುದು), ಜೀರಿಗೆ, ಹಿಂಗು...

ನೆಲ್ಲಿಕಾಯಿಗಳನ್ನು ನೀರಲ್ಲಿ ಬೇಯಿಸಿ. ಬೆಂದ ಮೇಲೆ ಅದರ ಬೀಜ ಬೇರ್ಪಡಿಸಿ. ಸ್ವಲ್ಪ ಎಣ್ಣೆಯಲ್ಲಿ ಜೀರಿಗೆ , ಹಿಂಗು ಮತ್ತು ಹಸಿಮೆಣಸಿನ ಕಾಯಿ (ಕಾಳುಮೆಣಸು) ಫ್ರೈ ಮಾಡಿ. ಕಾಯಿತುರಿಯೊಟ್ಟಿಗೆ ಇವನ್ನು ಮಿಕ್ಸ್ ಮಾಡಿ, ಸ್ವಲ್ಪವೆ ಹುಣಸೆ ಹುಳಿ ಹಾಕಿ ನುಣ್ಣಗೆ ರುಬ್ಬಿ. ನೆಲ್ಲಿಕಾಯಿ ಬೇಯಿಸಿದ ನೀರಿನಲ್ಲಿ ಈ ಮಿಶ್ರಣ ಹಾಕಿ. ಬೇಕಿದ್ದರೆ ಇನ್ನೂ ನೀರು ಬೆರೆಸಿ ತೆಳ್ಳಗೆ ಮಾಡಿ. ಉಪ್ಪು ಹಾಕಿ ಒಂದೆರಡು ಕುದಿ ಬರಲು ಬಿಡಿ. ಸಾಸಿವೆ ಕರಿಬೇವು ಅಥವಾ ಬೆಳ್ಳುಳ್ಳಿಯ ಒಗ್ಗರಣೆ  ಹಾಕಿ.

ನೆಲ್ಲಿ ಕಾಯಿ ಸಾರು ತಯಾರು...
:-)