ಅಡಿಕೆ ಪತ್ರಿಕೆ ನನ್ನ ನೆಚ್ಚಿನ ಪತ್ರಿಕೆ. ಇದು ಪ್ರಾರಂಭವಾದಾಗಿನಿಂದ ನಾವು ಇದಕ್ಕೆ ಚಂದಾದಾರರು, ಸುಮಾರು ೨೫ + ವರ್ಷಗಳೇ ಆದವು. ಇದರಲ್ಲಿನ ಅಡುಗೆಗಳನ್ನು ನಾನು ಮಾಡುತ್ತಿರುತ್ತೇನೆ. ಈ ತಿಂಗಳ ಸಂಚಿಕೆಯಲ್ಲಿ ಸಹನಾ ಕಾಂತಬೈಲ್ ಅವರು ಸಾಂಬ್ರಾಣಿ ಎಲೆಯ ಮೊಸರು ಗೊಜ್ಜು ರೆಸಿಪಿ ಹಾಕಿದ್ದಾರೆ.
ಅದರ ಬದಲಿಗೆ ನಾನು ಚಟ್ನಿ ಮಾಡುವಾ ಅಂತ ಸಾಂಬ್ರಾಣಿ ಎಲೆಗಳನ್ನು ಕುಂಡದಿಂದ ಆಯ್ದಿಟ್ಟೆ . ಅದಕ್ಕೆ ಬೇಕಾದ ಸಾಮಗ್ರಿ ಗಳನ್ನೂ ತಯಾರು ಮಾಡಿದೆ. ಚಟ್ನಿ ರುಬ್ಬುವಾಗ ಮಾತ್ರ ಯಾಕೋ ಒಂದು ಸಣ್ಣ ಸಂಶಯ . ಬಹುಶ: ಅವರು ಹೇಳಿದ್ದು ದೊಡ್ಡ ಪತ್ರೆ ಎಲೆಗಳೇನೋ ಅಂತ. :-) ಅವರಿಗೆ ಕೇಳುವಾ ಅಂದ್ರೆ ಯಾವ ಉಪಾಯವು ಇಲ್ಲ. ಒಳ್ಳೆ ಫಜೀತಿ ಮಾರಾಯ್ರೇ. ಯಾಕಂದ್ರೆ ಕೊಂಕಣಿಯಲ್ಲಿ ನಾವು ದೊಡ್ಡ ಪತ್ರೆ ಎಲೆಗಳನ್ನು ಸಾಂಬ್ರಾಣಿ ಅನ್ನುವುದುಂಟು. ಪುಟ್ಟ ಮಕ್ಕಳಿಗೆ ಶೀತ ಆದಾಗ ಇದರ ರಸವನ್ನು ಜೇನು ತುಪ್ಪದೊಂದಿಗೆ ನೆಕ್ಕಿಸುತ್ತೇವೆ. ಅಥವಾ ಮಕ್ಕಳಿಗೆ ಕಫ ಕಟ್ಟಿದಾಗ ಎಲೆಯನ್ನು ನ್ನು ಕಾವಲಿ ಮೇಲೆ ಬಿಸಿ ಮಾಡಿ , ಎಲೆಯನ್ನು ಮಕ್ಕಳ ಎದೆ ಮೇಲೆ ಇಡುವುದುದುಂಟು. ನನ್ನ ಮಕ್ಕಳ ಶೀತ ಜ್ವರಕ್ಕೆಲ್ಲ ನಾನು ಇದನ್ನೇ ಉಪಯೋಗಿಸುತ್ತಿದ್ದೆ, ಈಗ ಎಷ್ಟು ಜನ ಇದನ್ನು ಪಾಲಿಸ್ತಾರೋ ಗೊತ್ತಿಲ್ಲ. ಹುಷಾರು ತಪ್ಪಿದರೆ ಡಾಕ್ಟರ್ ಬಳಿ ಕರೆದುಕೊಂಡು ಹೋಗುವುದೇ ಹೆಚ್ಚು.ಇರಲಿ ಒಂದು ರುಚಿಯಾದ 'ಹೊಸರುಚಿ ' ಕಂಡುಹಿಡಿದಹಾಗೆ ಆಯ್ತಿತು.
ನಾನು ಸಾಂಬ್ರಾಣಿ ಗೆಡ್ಡೆಗಳನ್ನು(chinese potato) ಸುಮ್ಮನೆ ಕುಂಡದಲ್ಲಿ ಹಾಕಿಟ್ಟಿದ್ದೆ. ಅದು ಈ ಚಿತ್ರದಲ್ಲಿರುವಂತೆ ಬೆಳೆದಿದೆ ಇದೆ ಸಾಂಬ್ರಾಣಿ ಎಲೆಯನ್ನು ಅವರು ಉಲ್ಲೇಖಿಸಿದ್ದು ಅಂದುಕೊಂಡು ಚಟ್ನಿ ಮಾಡಿದ್ದೇನೆ . ತುಂಬಾ ರುಚಿಯಾಗಿದೆ ಚಟ್ನಿ.
ಚಟ್ನಿ ಮಾಡುವ ಬಗೆ
ಎರಡು ದೊಡ್ಡ ಚಮಚ್ ತೆಂಗಿನ ತೂರಿ, ನಾಲ್ಕೈದು ಹಸಿಮೆಣಸಿನ ಕಾಯಿ, ಸ್ವಲ್ಪ ಸಾಸಿವೆ, ಜೀರಿಗೆ, ಹಿಂಗು, ರುಚಿಗೆ ಉಪ್ಪು, ಸಣ್ಣ ತುಂಡು ಹುಣಸೆ ಹಣ್ಣು.
ಎಣ್ಣೆಯಲ್ಲಿ ಸಾಸಿವೆ, ಜೀರಿಗೆ ಮತ್ತು ಹಿಂಗನ್ನು ಬಾಡಿಸಿ. ಇದಕ್ಕೆ ಹಸಿಮೆಣಸಿನಕಾಯಿ, ಸಾಂಬ್ರಾಣಿ ಎಲೆ ಮತ್ತು ಕಾಯಿ ಹೀಗೆ ಅನುಕ್ರಮವಾಗಿ ಹಾಕಿ ಹುರಿಯಿರಿ, ಹುರಿಯುವುದು ಯಾಕೆಂದರೆ ಸೆಕೆಗೆ ಹಾಳಾಗುತ್ತದೆ. ತಣಿದ ಮೇಲೆ ಹುಣಸೆ ಹುಳಿ , ಉಪ್ಪು ಹಾಕಿ ನುಣ್ಣಗೆ ರುಬ್ಬಿ. ಬೇಕಾದರೆ ಮಜ್ಜಿಗೆ ಬೆರೆಸಿ ನೀರು ಮಾಡಿ, ಸಾಸಿವೆ ಕರಿಬೇವಿನ ಒಗ್ಗರಣೆ ಕೊಡ ಹಾಕಬಹುದು.
:-)