Wednesday, July 27, 2016

ಕೆಸುವಿನೆಲೆಯ ದಂಟು ಮತ್ತು ಹಲಸಿನ ಬೀಜ ಹಾಕಿ ಪಲ್ಯ

ಹಳೆಯ ಕಾಲದಲ್ಲಿ ಜೋರು  ಮಳೆಗಾಲದಲ್ಲಿ ರಸ್ತೆ ಸಂಪರ್ಕ ಇರುತ್ತಿರಲಿಲ್ಲ. ತೀರಾ ತುರ್ತು ಪರಿಸ್ಥಿತಿ ಇರದಿದ್ದಲ್ಲಿ ಯಾರು ಮನೆಯಿಂದ ಆಚೆ ಹೋಗುತ್ತಿರಲಿಲ್ಲ. ಊಟ ತಿಂಡಿಗೆ ಮನೆಯಲ್ಲೇ ಬೆಳೆದ ಸೊಪ್ಪು ತರಕಾರಿ ಬೆಳೆಸುತ್ತಿದ್ದರು. ಅಥವಾ ಸೀಸನ್ ನಲ್ಲಿ ಸಿಗುವ ತರಕಾರಿಗಳನ್ನು  ಮಾಳಿಗೆಯ ಮೇಲೆ ಚಂದ  ಮಾಡಿ ಜೋಡಿಸುತ್ತಿದ್ದರು. ನನ್ನ ಅಜ್ಜಿಯ ಮನೆಯಲ್ಲಿ ಅಡಿಗೆ ಮನೆಗೆ ಒಂದು ಅಟ್ಟ  ಇತ್ತು. ಆಗ ಎಲ್ಲ ಸೌದೆ  ಒಲೆಗಳು. ಅಲ್ಲಿಂದ ಹೊಗೆಯೆಲ್ಲ ಅಟ್ಟಕ್ಕೆ. ಅಲ್ಲಿ ಕಾಪಿಡುತ್ತಿದ್ದ, ಮನೆಯಲ್ಲೇ ತಯಾರಿಸಿದಂತಹ  ಹಪ್ಪಳ ಸಂಡಿಗೆಗೆಲ್ಲಾ ಹೊಗೆಯ ವಾಸನೆ. ಅಲ್ಲದೆ ಸಾಂಬಾರ್ ಸೌತೆ, ಸುವರ್ಣ ಗಡ್ಡೆಗಳು , ಕುಂಬಳಕಾಯಿಗಳನ್ನು ಮಳೆಗಾಲಕ್ಕೆ ಸೇವ್ ಮಾಡಿಡುತ್ತಿದ್ದರು. ಉಳಿದಂತೆ, ಬಸಳೆ, ಸೌತೆ, ತೊಂಡೆಕಾಯಿ , ಹರಿವೆ ಸೊಪ್ಪು, ಇವೆಲ್ಲ ಮನೆ ಅಂಗಳ ಅಥವಾ ಹಿತ್ತಲಲ್ಲಿ ಬೆಳೆಸುತ್ತಿದ್ದರು.  ಈಗ ಅದೆಲ್ಲ ನೆನಪು ಮಾತ್ರ. :-) 

ಮಳೆಗಾಲದಲ್ಲಿ ಕೆಸುವಿನ ಎಲೆ ಡಾಳಾಗಿ ಬೆಳೆಯುತ್ತವೆ. ಹಲಸಿನ ಹಣ್ಣು ಅದರ ಬೀಜ ಕೂಡ ಸಿಗುತ್ತವೆ . ಈ ಬೀಜಕ್ಕೆ ಸ್ವಲ್ಪ ಮಣ್ಣು ಮೆತ್ತಿ ಇಟ್ಟರೆ  ಹಲಸಿನ ಹಣ್ಣಿನ ಸೀಸನ್ ಮುಗಿದರು ತಿನ್ನ ಬಹುದು, ಈ ಪಲ್ಯ ಈಗ ಮಾಡುವವರು ಅತಿ ವಿರಳ ಅನ್ನ  ಬಹುದು. especially ಬೆಂಗಳೂರಿನಂತಹ ಊರಲ್ಲಿ. ನಾವು ದಕ್ಷಿಣ ಕನ್ನಡದಲ್ಲಿ ಇವರ ಬ್ಯಾ೦ಕ್  ನೌಕರಿಯ ನಿಮಿತ್ತ ಅಲ್ಲೆಲ್ಲ ಇದ್ದಾಗ ಇವನ್ನೆಲ್ಲ ತುಂಬಾ ಮಾಡುತ್ತಿದ್ದೆವು. ಈ ಕೆಸುವಿನ ಎಲೆಗಳನ್ನು ನಾವು ಬೆಳಗಾವಿಯ ಒಬ್ಬರ ತೋಟದಿಂದ ತಂದಿದ್ದು. ಕಪ್ಪು ಕೆಸುವಿನ ಎಲೆಯ ದಂಟು ಗಂಟಲಿಗೆ ಕೆರೆತ ಉಂಟು ಮಾಡುವುದಿಲ್ಲ. 

ಮಳೆಗಾಲದಳ್ಳಿ  ಕೆಸುವಿನ ಎಲೆ ತಿಂದ ಮೈಯಲ್ಲಿಶಾಖ ಉತ್ಪನ್ನ ಆಗಿ ಮಳೆಗಾಲದ ಕಾಯಿಲೆಗಳನ್ನು ದೂರವಿಡ ಬಹುದೆಂದು ಹೇಳುತ್ತಾರೆ. ಆದರೆ ಬಾಯಿರುಚಿಗೆಇದನ್ನು ಯಾವಾಗ ಬೇಕು ಆವಾಗ ಮಾಡಿ ತಿನ್ನ ಬಹುದು :-) 


ಈಗ ಪಲ್ಯ ಮಾಡುವ ವಿಧಾನಕ್ಕೆ ಬರುವ. 

ಕಪ್ಪು ಕೆಸುವಿನ ಎಳೆಯ ದಂಟು, ನಾರು ತೆಗೆದು ಚಿಕ್ಕ ತುಂಡುಗಳನ್ನು ಮಾಡಿದ್ದು   - ಅರ್ಧ ಕಪ್ 
ಉಪ್ಪು ಹಾಕಿ ಬೇಯಿಸಿದ , ಜಜ್ಜಿ ಸಿಪ್ಪೆ ತೆಗೆದ ಹಲಸಿನ ಕಾಯಿ ಬೀಜ- ಅರ್ಧ ಕಪ್ 
ಒಗ್ಗರಣೆಗೆ ಬೆಳ್ಳುಳ್ಳಿ, ಕೆಂಪು ಮೆಣಸಿನ ಚೂರು , ಬೆಲ್ಲ, ಹುಣಸೆ ನೀರು. 

ಹುಣಸೆ ಹಣ್ಣಿಗೆ ಸ್ವಲ್ಪ ನೀರು ಹಾಕಿಡಿ 

ಎಣೆಯಲ್ಲಿ ಬೆಳ್ಳುಳ್ಳು ವಗ್ಗರಿಸಿ , ಕೆಂಪಗಾದಾಗ ಕೆಂಪು ಮೆಣಸಿನ ಫ್ಲೆಕ್ಸ್ ಹಾಕಿ, ಬೇಯಿಸಿದ ಹಲಸಿನ ಬೀಜ ಹಾಕಿ ಕೈಯಾಡಿಸಿ. ಆಮೇಲೆ ದಂಟುಗಳನ್ನು ಬೆರಸಿ , ಉಪ್ಪು ಹುಣಸೆ ನೀರು ಹಾಕಿ (ಉಪ್ಪು ಹಲಸಿನ ಬೀಜಕ್ಕೆ ಹಾಕಿದ್ದರಿಂದ ರುಚಿ ನೋಡಿ ಬೇಕಿದ್ದಲ್ಲಿ ಮಾತ್ರ ಉಪ್ಪು ಬೆರೆಸಿ), ಬೆಲ್ಲ ಹಾಕಿ ಮುಚ್ಚಿಡಿ. ಸ್ವಲ್ಪ ಹೊತ್ತಿಗೆ ದಂಟುಗಳು ಮೃದುವಾಗುತ್ತ್ತವೆ. ಒಲೆಯಿಂದ ತೆಗೆದಿಡಿ. ಪಲ್ಯ ರೆಡಿ.  

ಉಪ್ಪು, ಬೆಲ್ಲ ಹುಣಸೆ ಹುಳಿ  ಸರಿಯಾದ ಮಿಶ್ರಣವಾಗಬೇಕು. ಆಗ ಈ ಪಲ್ಯಕ್ಕೆ ರುಚಿ. ಬಿಸಿ ಅನ್ನದೊಂದಿಗೆ ಮಿಕ ಮಾಡಿ , ಅಥವಾ  ಸೆಡ್ ಡಿಶ್ ಆಗಿಯೂ ಉಪಯೋಗಿಸ ಬಹುದು 

No comments: