ಹಲವಾರು ವರ್ಷಗಳ ಹಿಂದೆ ನಾವು ದೆಹಲಿ, ರಾಜಸ್ಥಾನ್ ಟೂರ್ ಹಾಕಿಕೊಂಡಿದ್ದೆವು. ದೆಹಲಿಯಿಂದ ಗಾಡಿ ಮಾಡಿಕೊಂಡು ಆಗ್ರಾ, ಉದೈಪುರ್ , ರಣಕಪುರ್ , ಜೈಪುರ್ ನಿಂದ ಮೌಂಟ್ ಅಬು ತನಕ ಹೋಗಿ ಬಂದಿದ್ದೆವು. ಒಟ್ಟು ಹದಿನೈದು ದಿನದ ಟೂರ್. ಜೈಪುರ್ ನಲ್ಲಿ ಹೀಗೆ ಒಂದು ದಿನ ಜೋರು ಹಸಿವು. ಜೈಪುರ್ ದಾಟಿದ ನಂತರದ ಹಳ್ಳಿ ಅದು. ಅಲ್ಲೊಂದು ಸಣ್ಣ ದುಕಾನು . ಅಲ್ಲಿ 'ಇಲ್ಲಿ ದಾಲ್ ಬಾಟಿ ಚುರ್ಮಾ ಸಿಗುತ್ತದೆ' ಅಂತ ಹಿಂದಿಯಲ್ಲಿ ಬೋರ್ಡ್ ಹಾಕಿದ್ದರು. ನಮಗೋ ಕುತೂಹಲ. ನಮ್ಮ ಕುತೂಹಲ ನೋಡಿ ಅಂಗಡಿಯಾಕೆ ಖುಶಿಯಿಂದ ನಮಗೋಸ್ಕರ ಬಿಸಿ ಬಿಸಿ ಬಾಟಿ ಮಾಡಿಕೊಟ್ಟಳು. ಏನಿಲ್ಲ ಚಪಾತಿ ಹಿಟ್ಟು. ಅದನ್ನು ಗೋಲ ಆಕಾರ ಮಾಡಿ ಇದ್ದಿಲು ಒಲೆಯಲ್ಲಿ ಹಾಕಿ ಬೇಯಿಸುವುದು. ಬೆಂದ ಮೇಲೆ ಅದನ್ನು ಪುಡಿ ಮಾಡಿ ಅದರ ಮೇಲೆ ದಾಲ್ ಸುರಿದು ತುಪ್ಪದ ಜತೆ ತಿನ್ನುವುದು. ನಮಗಂತೂ ತುಂಬಾ ರುಚಿ ಅನ್ನಿಸ್ತು.
ಇಲ್ಲಿನ ಗಾಂಧಿ ನಗರ ದ ಸುಖ ಸಾಗರ್ ನಲ್ಲಿ ಸಿಗುತ್ತದೆ. ಆದರೆ ಅದು ನಮಗಷ್ಟು ಇಷ್ಟ ಆಗಲಿಲ್ಲ ಹಾಗಾಗಿ ಮನೆಯಲ್ಲೇ ಮಾಡಿಕೊಳ್ಳುವುದನ್ನು ಕಲಿತಿದ್ದೇವೆ,
ಬಾಟಿ ಮಾಡುವ ವಿದಾನ: ಮಜ್ಜಿಗೆಗೆ ಸ್ವಲ್ಪ್ಲ ಸೋಡಾ ಪುಡಿ ಉಪ್ಪು ಚಿಟಿಕೆ ಸಕ್ಕರೆ ಬೆರೆಸಿ. ಅವೆಲ್ಲ ಕರಗಿದ ಮೇಲೆ ಗೋದಿ ಹಿಟ್ಟು ಬೇಕಾದಷ್ಟು ನೀರು ಬೆರೆಸಿ ಮಾಮೂಲಿ ಚಪಾತಿ ಹಿಟ್ಟಿಗಿಂತ ಸ್ವಲ್ಪ ಸಾಫ್ಟ್ ಕಣಕ ತಯಾರಿಸಿ. ಇದಕ್ಕೆ ಎರಡು ಚಮಚ ಎಣ್ಣೆ ಹಚ್ಚಿಡಿ. ಹತ್ತರಿಂದ ಮೂವತ್ತು ನಿಮಿಷ ಹಾಗೆ ಇಡಿ. ಆಮೇಲೆ ಸಣ್ಣ ಉಂಡೆ ಗಾತ್ರದ ಹಿಟ್ಟು ತಯಾರಿಸಿ.
ನಿಮ್ಮ ಬಾರ್ಬೇಕ್ಯು ರೆಡಿ ಮಾಡಿಕೊಳ್ಳಿ . ನಾನು ತೆಂಗಿನ ಚಿಪ್ಪಿನಿಂದ ಬೆಂಕಿ ತಯಾರಿಸುತ್ತೇನೆ.( ಡೀಪ್ ಫ್ರೈ ಮಾಡಿದ ಎಣ್ಣೆಯನ್ನು ನಾನು ಪುನಃ ಬಳಸಲ್ಲ ಅವನ್ನೆಲ ಬಾಟಲಿಯಲ್ಲಿ ಶೇಖರಿಸಿ ಹಲಸಿನ ಹಣ್ಣು ಕಟ್ ಮಾಡುವಾಗ ಕೈ ಗೆ ಹಚ್ಚಲು, ಸಾಂಬ್ರಾಣಿ ಗದ್ದೆಯ ಸಿಪ್ಪೆ ತೆಗೆಯುವಾಗ ಅಥವಾ ಬಾರ್ಬೇಕ್ಯು ಬೆಂಕಿ ಹಚ್ಚಲು ಉಪಯೋಗಿಸುತ್ತೇನೆ. )
ಹದವಾದ ಕೆಂಡ ತಯಾರಾದ ಮೇಲೆ ಉಂಡೆಗಳನ್ನು ಗ್ರಿಲ್ ಮೇಲಿರಿಸಿ. ಕೆಂಬಣ್ಣಕ್ಕೆ ತಿರುಗಿದೊಡನೆ ಇನ್ನೊಂದು ಬದಿ ಕಾಯಿಸಿ. ಬಿಸಿ ಬಿಸಿಯಿರುವಾಗಲೇ ಸರ್ವ್ ಮಾಡಿ. ಈ ಬಾಟಿ ಗಳು ಬೆಂದ ಮೇಲೆ ತಮ್ಮಷ್ಟಕ್ಕೆ ಸ್ಪ್ಲಿಟ್ ಆಗುತ್ತವೆ. ಚಿತ್ರದಲ್ಲಿರುವಷ್ಟು ಕೆಂಪು ಮಾಡಬೇಡಿ. ಬೆಂಕಿ ಜಾಸ್ತಿಯಾಗಿ ಹೀಗಾಯ್ತು.
ದಾಲ್ : ಎಲ್ಲ ದಾಲ್ ಗಳನ್ನು ಅಂದರೆ: ಮಸೂರ್ , ಹಸಿರುಬೇಳೆ, ಸಿಪ್ಪೆ ಸಹಿತ ಉದ್ದಿನ ಬೇಳೆ , ಕಡಲೆ ಬೇಳೆ , ತೊಗರಿ ಬೇಳೆ ಹೀಗೆ ಒಂದೊಂದು ಟೇಬಲ್ ಸ್ಪೂನ್( ಅಥವಾ ಈಗ ಸೂಪರ್ ಸ್ಟೋರ್ ಗಳಲ್ಲಿ ಮಿಕ್ಸ್ ದಾಲ್ ಪ್ಯಾಕೆಟ್ ಸಿಗುತ್ತೆ ಅದನ್ನೇ ಉಪಯೋಗಿಸಬಹುದು) - ನೀರಲ್ಲಿ ೬-೮ ಗಂಟೆ ನೆನೆಸಿ ಕುಕ್ಕರ್ ನಲ್ಲಿ ಬೇಯಿಸಿಡಿ. (ಬೇಯಿಸುವಾಗ ಸಣ್ಣಕ್ಕೆ ಕತ್ತರಿಸಿದ ನೀರುಳ್ಳಿ , ಸ್ವಲ್ಪ ಟೊಮೇಟೋ, ಬೆಳ್ಳುಳ್ಳಿ, ಅರ್ಧ ಸ್ಪೂನ್ ಅರಿಸಿನ ಹಾಕಿ ಬೇಯಿಸಿ. ಸರೀ ಬೇಯ ಬೇಕು. ಕುಕ್ಕರ್ ನಿಂದ ತೆಗೆದು ಚೆನ್ನಾಗಿ ಮ್ಯಾಶ್ ಮಾಡಿ.
ಎಣ್ಣೆ ಬಿಸಿ ಮಾಡಲು ಇಡಿ, ಇದಕ್ಕೆ ಜೀರಿಗೆ, ಶುಂಠಿ ಬೆಳ್ಳುಳ್ಳಿ ಪೇಸ್ಟ್ , ಇನ್ನೊಂದಿಷ್ಟು ನೀರುಳ್ಳಿ ಹಾಕಿ ಕೆಂಪು ಆಗುವ ತನಕ (ಘಂ ಎನ್ನುವ ಸುವಾಸನೆ) ಬರುವ ತನಕ ಹುರಿಯಿರಿ. ಹಸಿ ಮೆಣಸಿಅ ಕಾಯಿ, ಕೆಂಪು ಮೆಣಸಿನ ಪುಡಿ, ಗರಂ ಮಸಾಲೆ ಪುಡಿ ಬೆರೆಸಿ ಎರಡು ನಿಮಿಷ ಕೈಯಾಡಿಸಿ. ಸ್ವಲ್ಪ ಟೋಮೇಟೊ ಬೆರೆಸಿ. ಉಪ್ಪು ಹಾಕಿ ಟೊಮೆಟೊ ಬೆಂದ ಮೇಲೆ, ಬೇಯಿಸಿದ ಬೇಳೆ ಹಾಕಿ. ಚೆನ್ನಾಗಿ ಕುದಿ ಬಂದ ನಂತರ ಕೆಳಗಿಡಿ.
ದಾಲ್ ಬಾಟಿ
ಬಿಸಿ ಬಾಟಿಯನ್ನು ನಾಲ್ಕು ಪೀಸ್ ಗಳಾಗಿ ಮಾಡಿ. ಇದರ ಮೇಲೆ ತುಪ್ಪ ಸುರಿಯಿರಿ, ಆಮೇಲೆ ಬಿಸಿ ದಾಲ್ ....ದಾಲ್ ಬಾಟಿ ರೆಡಿ.
:-)
ಉಳಿದ ಬಾಟಿ ಯನ್ನು ಚೆನ್ನಾಗಿ ಪುಡಿ ಮಾಡಿ ಬೆಲ್ಲದ ಹುಡಿ ತುಪ್ಪ ಬೆರೆಸಿದರೆ ಅದೇ ಚುರ್ಮಾ.
ಮಾಡಿ ಎಂಜಾಯಿಸಿ
No comments:
Post a Comment