Thursday, March 26, 2015

ಬಾಳೆ ಹಣ್ಣಿನ ಚಪಾತಿ

ನನ್ನ ನಿಂಪಿ ಆಫಿಸ್ ನಲ್ಲಿ ಅರ್ಧಕ್ಕಿಂತ ಹೆಚ್ಚಿನವರು ಬ್ಯಾಚಲರ್ಸ್ ಗಳು. ನಾನು ಅವಳಿಗೆ ಲಂಚ್ ಬಾಕ್ಸ್ ನಲ್ಲಿ ಕಳಿಸುವ ತಿಂಡಿಗಳ ಬಗ್ಗೆ ಕೌತುಕ. ನಿಮ್ಮ ಅಮ್ಮ ಮಾಡುವ ಚಪಾತಿ ಹೇಗೆ ಸಾಫ್ಟ್ ಆಗಿರುತ್ತೆ? ಎಲ್ಲಿಂದ ಹಿಟ್ಟು ತರಿಸ್ತಿರಿ, ಯಾವ ಹಿಟ್ಟು ತರಿಸ್ತೀರಿ? packed ಆ loose ಆ ವಗೈರೆ. ಈ ಹುಡುಗರು ಒಂದು ರೂಮ್ ಮಾಡಿಕೊಂಡು ಇರೋದಂತೆ. ಊರಿನಿಂದ ಒಬ್ಬ ಅಡಿಗೆಯವನನ್ನು ಇಟ್ಟುಕೊಂಡಿದ್ದಾರೆ. 10 -15 ಜನರಿಗೆ ಅವನು ಅಡಿಗೆ ಮಾಡಿ ಹಾಕುತ್ತಾನಾದ್ದರಿಂದ, ಹಲವಾರು ಜನರ ಬಾಕ್ಸ್ ನಲ್ಲಿ ಒಂದೇ ತಿಂಡಿ. ಅದೇನು ಶೇರ್ ಮಾಡಕ್ಕೆ ಆಗಲ್ಲ. ಈಗ ನಿಹಾ ಅವರ ಜತೆ ಕೆಲಸಕ್ಕೆ ಸೇರಿದ ಮೇಲೆ, ಕೆಲವೊಮ್ಮೆ ಅವಳ ಲಂಚ್ ಬಾಕ್ಸ್ ಅವರೇ ಖಾಲಿ ಮಾಡಿ, ಬಾಕ್ಸ್ ತೊಳೆದಿಟ್ಟು, ಅವಳಿಗೋಸ್ಕರ ಹೋಟಲ್ ನಿಂದ ಫ್ರೈಡ್ ರೈಸ್ ಮುಂತಾದ್ದು ತಂದು ಕೊಡುತ್ತಾರಂತೆ. ನಾನು ಅವಳಿಗೆ ಎರಡು ಬಾಕ್ಸ್ ತೆಗೊಂಡು ಹೋಗೆ ಅನ್ನುತ್ತಿರುತ್ತೇನೆ. ಒಂದು ನಿನಗೆ ಒಂದು ಅವರಿಗೆ ಅಂತ. ಅಯ್ಯೋ ಯಾರಮ್ಮ ಹೊತ್ತು ಕೊಂಡು ಹೋಗ್ತಾರೆ? ನಾನಂತು ಉಪವಾಸ ಇರಲ್ಲ. ಏನಿಲ್ಲದ್ದಿದ್ದರೆ ಅವರ ಆಫಿಸ್ ನಲ್ಲಿ ಮ್ಯಾಗಿ ಪ್ಯಾಕೆಟ್, ಬಿಸ್ಕಟ್ ವಗೈರೆ ಇರುತ್ತದಂತೆ. ಅದರ ಬಳಿ ಒಂದು ಡಬ್ಬಿ ಇರುತ್ತದಂತೆ.ಏನಾದರೂ ಉಪಯೋಗಿಸುವುದಿದ್ದರೆ  ಆ ಡಬ್ಬಿಯಲ್ಲಿ ಆ ಪ್ಯಾಕೆಟ್ ನಲ್ಲಿ ನಮೂದಿಸಿರುವ ಬೆಲೆಯ ಹಣವನ್ನು ಡಬ್ಬಿಗೆ ಹಾಕಿ ಬಿಡುವುದಂತೆ. ಪಿಯೋನ್ ಖಾಲಿಯಾದಂತೆ ಅಡಿಗೆ ಸಾಮಾಗ್ರಿ ಅಲ್ಲಿ ತುಂಬಿಡುತ್ತಾಳಂತೆ. ದಿನದಲ್ಲಿ ಮೂರು ನಾಲ್ಕು ಬಾರಿ ಟೀ ಮತ್ತು ಬಿಸ್ಕಟ್ ಇವರು ಕೂತ ಕಡೆ ಸರಬರಾಜಾಗುತ್ತಂತೆ. ಅದಕ್ಕೆ ಅವಳು ಆಫಿಸ್ ನಿಂದ ಮನೆಗೆ ಎರಡು ಕಿ ಮಿ ನಡೆದುಕೊಂಡು ಬರುತ್ತಾಳೆ. ಮತ್ತೆ ಎರಡೆರಡು ಡಬ್ಬಿ ಎತ್ತಿಕೊಂಡು ಹೋಗು ಅಂತ ಹೇಗೆ ಹೇಳಲಿ?? :-) ಇರೋ ಒಂದು ಬಾಕ್ಸ್ ನಲ್ಲೇ ಆದಷ್ಟು ತಿಂಡಿ ತುರುಕಿಸಿ ಕಳಿಸ್ತೀನಿ.
ಬಾಳೆ ಹಣ್ಣಿನ ಚಪಾತಿ ಮಾಡುವ ಬಗ್ಗೆ
4-5 ತುಂಬಾ ಹಣ್ಣಾದ (ಕಳಿತ) ಬಾಳೆಹಣ್ಣು, 10-15 ಕರಿ ಮೆಣಸಿನ ಪುಡಿ,2 ಸ್ಪೂನ್ ಜೀರಿಗೆ, ರುಚಿಗೆ ತಕ್ಕ ಉಪ್ಪು ಉಪ್ಪು...ಇವಿಷ್ಟನ್ನೂ ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿ. ಇದಕ್ಕೆ ನಾಲ್ಕೈದು ಬಟ್ಟಲು ಗೋದಿ ಹಿಟ್ಟು ಬೆರೆಸಿ. ಬೇಕಾದರೆ ನೀರು ಬೆರೆಸಿ ಮೆತ್ತಗಿನ ಹಿಟ್ಟು ತಯಾರಿಸಿ. ಚಪಾತಿ ಲಟ್ಟಿಸಿ. ಬಿಸಿ ಕಾವಲಿ ಮೇಲೆ ಹಾಕಿ ತುಪ್ಪ ಹಚ್ಚಿ ಎರಡೂ ಬದಿ ಕಾಯಿಸಿ. ಅಷ್ಟೆ

ಈ ಚಪಾತಿಗೆ ಸೈಡ್ಸ್ ಎಲ್ಲ ಬೇಡ. ಆಫಿಸ್ ಕೆಲ್ಸ ಮಾಡ್ತಾ ಅಥವಾ ನನ್ನ ತರಹ ಯು ಟ್ಯೂಬ್ ನಲ್ಲಿ ಫಿಲ್ಮ್ ನೋಡ್ತಾ ಗುಳುಂ ಮಾಡಬಹುದು.
:-)

No comments: