Friday, May 5, 2017

ಸಾಂಬ್ರಾಣಿ ಎಲೆಯ ಚಟ್ನಿ

ಅಡಿಕೆ ಪತ್ರಿಕೆ ನನ್ನ ನೆಚ್ಚಿನ ಪತ್ರಿಕೆ. ಇದು ಪ್ರಾರಂಭವಾದಾಗಿನಿಂದ ನಾವು ಇದಕ್ಕೆ ಚಂದಾದಾರರು, ಸುಮಾರು ೨೫ + ವರ್ಷಗಳೇ ಆದವು. ಇದರಲ್ಲಿನ ಅಡುಗೆಗಳನ್ನು ನಾನು ಮಾಡುತ್ತಿರುತ್ತೇನೆ. ಈ ತಿಂಗಳ ಸಂಚಿಕೆಯಲ್ಲಿ ಸಹನಾ ಕಾಂತಬೈಲ್ ಅವರು ಸಾಂಬ್ರಾಣಿ ಎಲೆಯ ಮೊಸರು ಗೊಜ್ಜು ರೆಸಿಪಿ ಹಾಕಿದ್ದಾರೆ. 
ಅದರ ಬದಲಿಗೆ ನಾನು ಚಟ್ನಿ ಮಾಡುವಾ ಅಂತ ಸಾಂಬ್ರಾಣಿ ಎಲೆಗಳನ್ನು ಕುಂಡದಿಂದ ಆಯ್ದಿಟ್ಟೆ . ಅದಕ್ಕೆ ಬೇಕಾದ ಸಾಮಗ್ರಿ ಗಳನ್ನೂ ತಯಾರು ಮಾಡಿದೆ. ಚಟ್ನಿ ರುಬ್ಬುವಾಗ ಮಾತ್ರ ಯಾಕೋ ಒಂದು ಸಣ್ಣ ಸಂಶಯ . ಬಹುಶ: ಅವರು ಹೇಳಿದ್ದು ದೊಡ್ಡ ಪತ್ರೆ ಎಲೆಗಳೇನೋ ಅಂತ. :-) ಅವರಿಗೆ ಕೇಳುವಾ ಅಂದ್ರೆ ಯಾವ ಉಪಾಯವು ಇಲ್ಲ. ಒಳ್ಳೆ ಫಜೀತಿ ಮಾರಾಯ್ರೇ. ಯಾಕಂದ್ರೆ ಕೊಂಕಣಿಯಲ್ಲಿ ನಾವು ದೊಡ್ಡ ಪತ್ರೆ ಎಲೆಗಳನ್ನು ಸಾಂಬ್ರಾಣಿ ಅನ್ನುವುದುಂಟು. ಪುಟ್ಟ ಮಕ್ಕಳಿಗೆ ಶೀತ ಆದಾಗ ಇದರ ರಸವನ್ನು ಜೇನು ತುಪ್ಪದೊಂದಿಗೆ ನೆಕ್ಕಿಸುತ್ತೇವೆ. ಅಥವಾ ಮಕ್ಕಳಿಗೆ ಕಫ ಕಟ್ಟಿದಾಗ  ಎಲೆಯನ್ನು ನ್ನು ಕಾವಲಿ ಮೇಲೆ ಬಿಸಿ ಮಾಡಿ , ಎಲೆಯನ್ನು ಮಕ್ಕಳ ಎದೆ ಮೇಲೆ ಇಡುವುದುದುಂಟು. ನನ್ನ ಮಕ್ಕಳ ಶೀತ ಜ್ವರಕ್ಕೆಲ್ಲ ನಾನು ಇದನ್ನೇ ಉಪಯೋಗಿಸುತ್ತಿದ್ದೆ,  ಈಗ ಎಷ್ಟು ಜನ ಇದನ್ನು ಪಾಲಿಸ್ತಾರೋ ಗೊತ್ತಿಲ್ಲ. ಹುಷಾರು ತಪ್ಪಿದರೆ ಡಾಕ್ಟರ್ ಬಳಿ ಕರೆದುಕೊಂಡು ಹೋಗುವುದೇ ಹೆಚ್ಚು.ಇರಲಿ ಒಂದು ರುಚಿಯಾದ  'ಹೊಸರುಚಿ ' ಕಂಡುಹಿಡಿದಹಾಗೆ ಆಯ್ತಿತು. 
ನಾನು ಸಾಂಬ್ರಾಣಿ ಗೆಡ್ಡೆಗಳನ್ನು(chinese potato) ಸುಮ್ಮನೆ ಕುಂಡದಲ್ಲಿ ಹಾಕಿಟ್ಟಿದ್ದೆ. ಅದು ಈ ಚಿತ್ರದಲ್ಲಿರುವಂತೆ ಬೆಳೆದಿದೆ ಇದೆ  ಸಾಂಬ್ರಾಣಿ  ಎಲೆಯನ್ನು ಅವರು ಉಲ್ಲೇಖಿಸಿದ್ದು  ಅಂದುಕೊಂಡು  ಚಟ್ನಿ ಮಾಡಿದ್ದೇನೆ . ತುಂಬಾ ರುಚಿಯಾಗಿದೆ ಚಟ್ನಿ. 

ಚಟ್ನಿ ಮಾಡುವ ಬಗೆ 
ಎರಡು ದೊಡ್ಡ ಚಮಚ್ ತೆಂಗಿನ ತೂರಿ, ನಾಲ್ಕೈದು ಹಸಿಮೆಣಸಿನ ಕಾಯಿ, ಸ್ವಲ್ಪ ಸಾಸಿವೆ, ಜೀರಿಗೆ, ಹಿಂಗು, ರುಚಿಗೆ ಉಪ್ಪು, ಸಣ್ಣ ತುಂಡು ಹುಣಸೆ ಹಣ್ಣು. 
ಎಣ್ಣೆಯಲ್ಲಿ ಸಾಸಿವೆ, ಜೀರಿಗೆ ಮತ್ತು  ಹಿಂಗನ್ನು ಬಾಡಿಸಿ. ಇದಕ್ಕೆ ಹಸಿಮೆಣಸಿನಕಾಯಿ, ಸಾಂಬ್ರಾಣಿ ಎಲೆ ಮತ್ತು ಕಾಯಿ ಹೀಗೆ ಅನುಕ್ರಮವಾಗಿ ಹಾಕಿ  ಹುರಿಯಿರಿ, ಹುರಿಯುವುದು ಯಾಕೆಂದರೆ ಸೆಕೆಗೆ ಹಾಳಾಗುತ್ತದೆ. ತಣಿದ ಮೇಲೆ ಹುಣಸೆ ಹುಳಿ , ಉಪ್ಪು ಹಾಕಿ ನುಣ್ಣಗೆ ರುಬ್ಬಿ. ಬೇಕಾದರೆ ಮಜ್ಜಿಗೆ ಬೆರೆಸಿ ನೀರು ಮಾಡಿ, ಸಾಸಿವೆ ಕರಿಬೇವಿನ ಒಗ್ಗರಣೆ ಕೊಡ ಹಾಕಬಹುದು. 
:-) 

Wednesday, March 22, 2017

ಇದು ಕೇಕ್!! ಹಲಸಿನ ಹಣ್ಣು ಅಲ್ಲ

ಈ ಹಲಸಿನ ಹಣ್ಣಿನ ಕೇಕ್ ಗೆ ಮಗಳು ಹಲಸಿನ ಹಣ್ಣಿನ ತುಂಡುಗಳನ್ನು ಫಿಲ್ ಮಾಡಿದ್ದಾಳೆ. ಫೇಸ್ ಬುಕ್ ಪೇಜ್ ಗಳಲ್ಲಿ ಇದು ವೈರಲ್ ಆಗಿದೆ. ಫೇಸ್ ಬುಕ್ ಅಕೌಂಟ್ ಇಲ್ಲದವರಿಗೋಸ್ಕರ ಈ ಚಿತ್ರ ಇಲ್ಲಿ ಹಾಕುತ್ತ ಇದ್ದೇನೆ. :-)
ಇನ್ನೊಮ್ಮೆ ಹೇಳುತ್ತೇನೆ ಬಿಸ್ಕುಟ್ ಫ್ಯಾಕ್ಟರಿ ಯಲ್ಲಿ ತಯಾರಾಗುವ ತಿನಿಸುಗಳಿಗೆ ಮೊಟ್ಟೆ ಬಳಸಲಾಗುವುದಿಲ್ಲ .
ಇನ್ನಷ್ಟು ಕೇಕ್ ಚಿತ್ರಗಳಿಗಾಗಿ ಕೆಳಗಿನ ಲಿಂಕ್ ಮೇಲೆ ಕ್ಲಿಕ್ಕಿಸಿ ಹಾಗು ಲೈಕ್ ಒತ್ತಿ.
ಧನ್ಯವಾದಗಳು


https://www.facebook.com/BiscootFactory/

Biscoot Factory call/WhatsApp 9902825368

Friday, November 18, 2016

ಚೀನಿಕಾಯಿ ಗೊಜ್ಜು/ಚಟ್ನಿ

ತೆಂಗಿನಕಾಯಿ ತುರಿದ ಚೀನಿಕಾಯಿ ಸಮ ಪ್ರಮಾಣ. ನಾನಿಲ್ಲಿ ಒಂದು ದೊಡ್ಡ ಟೇಬಲ್ ಚಮಚ ತೆಗೊಂಡಿದ್ದೀನಿ, ಮತ್ತು ಬೇಕಾದಷ್ಟು ಹಸಿಮೆಣಸಿನಕಾಯಿ 

ಎಣ್ಣೆಯಲ್ಲಿ ಜೀರಿಗೆ ಹಿಂಗು ಹಸಿಮೆಣಸಿನಕಾಯಿ ಬಾಡಿಸಿ. ಇದಕ್ಕೆ ತುರಿದ ಚೀನಿಕಾಯಿ ಆಮೇಲೆ ಕಾಯಿ ತುರಿ  ಬೆರೆಸಿ ಕೈಯಾಡಿಸಿ. 


 ತಣ್ಣಗಾದ ಮೇಲೆ ಚಿಕ್ಕ ತುಂಡು ಹುಣಸೆ ಹಾಕಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ . ಉಪ್ಪು ಬೆರೆಸಿ.
ಒಗ್ಗರಣೆಗೆ ಉದ್ದಿನಬೇಳೆ, ಜೀರಿಗೆ ಸಾಸಿವೆ, ಕರಿಬೇವು, ಕೆಂಪು ಮೆಣಸು ಹಾಕಿ 

ಒಗ್ಗರಣೆ ಬೆರೆಸಿ. ಊಟಕ್ಕೆ ಬಡಿಸುವ ಸ್ವಲ್ಪ ಮೊದಲು ಮೊಸರು ಸೇರಿಸಿ ಮಿಕ್ಸ್ ಮಾಡಿ. 
ಬಿಸಿ ಬಿಸಿ ಅನ್ನಕ್ಕೆ ಚಪಾತಿಗೆ ಒಳ್ಳೆಯ ಸಾಥ್ .ಸುಲಭ ಮತ್ತು ರುಚಿಕರ 

Saturday, November 5, 2016

ಬರಗು ಖಿಚಡಿ (proso millet sweet khichdi)

 ನಾನು ಇತ್ತೀಚಿಗೆ ಅನ್ನದ ಬಳಕೆ ಕಡಿಮೆ ಮಾಡಿ ಸಿರಿ ಧಾನ್ಯದ ಮೊರೆ ಹೊಕ್ಕಿದ್ದೇನೆ.
ನಿನ್ನೆ ಖಿಚಡಿ ಮಾಡಿದ್ದೆ.
ಬೇಕಾಗುವ ಸಾಮಗ್ರಿ:
ಅರ್ಧ ಕಪ್ ಹೆಸರು ಬೇಳೆ , ಒಂದು ಕಪ್ ಸಿರಿ/ಕಿರು ಧಾನ್ಯ ಯಾವುದಾದರೂ, ಒಂದು ಕಳಿತ ನೇಂದ್ರ ಬಾಳೆಹಣ್ಣು , ಒಂದು  ಕಪ್ ತಾಜಾ ತೆಂಗಿನ ಕಾಯಿತುರಿ , ಒಂದು ವರೆ ಕಪ್ ಬೆಲ್ಲದ ಹುಡಿ, ಸ್ವಲ್ಪ ತುಪ್ಪ , ಗೋಡಂಬಿ ದ್ರಾಕ್ಷಿ ,ಏಲಕ್ಕಿ


ಹೆಸರು ಬೇಳೆ ಮತ್ತು ಧಾನ್ಯವನ್ನು ಸಣ್ಣ ಉರಿಯಲ್ಲಿ ಪರಿಮಳ ಬರುವ ತನಕ ಅಥವಾ ಬೇಳೆ ಗೆ ಬಂಗಾರದ ಬಣ್ಣ ಬರುವ ತನಕ ಬಾಣಲೆಯಲ್ಲಿ ಹುರಿಯಿರಿ.
ತಣ್ಣಗಾದ ನಂತರ ಮೂರು ಕಪ್ ನೀರಲ್ಲಿ ಕುಕ್ಕರ್ ನಲ್ಲಿ ಬೇಯಿಸಿ .( ಎರಡಿ ಸಿಟಿ ಕೂಗಿದ ಮೇಲೆ ಐದು ನಿಮಿಷ ಮಂದ ಉರಿಯಲ್ಲಿ ಬೇಯಲಿ. )
 ಬೆಲ್ಲದ ಪಾಂಕ ಮಾಡಿ ಅದಕ್ಕೆ ಕಾಯಿ ತುರಿ ಬೆರೆಸಿ . ನೇಂದ್ರ ಬಾಳೆ ಯನ್ನು ಮ್ಯಾಶ್ ಮಾಡಿ ಬೆರೆಸಿ.
ಇದಕ್ಕೆ ಬೇಯಿಸಿದ ಪದಾರ್ಥ ಹಾಕಿ , ಮುದ್ದೆ  ಯಾಗುವ ತನಕ ಒಲೆ ಮೇಲಿಡಿ. ಇದಕ್ಕೆ ತುಪ್ಪದಲ್ಲಿ ಕರಿದ ಗೋಡಂಬಿ ದ್ರಾಕ್ಷಿ ಬೆರೆಸಿ , ಏಲಕ್ಕಿ ಪುಡಿ ಬೆರೆಸಿ. ತಟ್ಟೆಯಲ್ಲಿ ಸ್ಪ್ರೆಡ್ ಮಾಡಿ ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿ, ಚಕ್ರದಾಕಾರದಲ್ಲಿ ಕತ್ತರಿಸಿದ  ಬಾಳೆ ಯ ಹಣ್ಣಿನ ಜತೆ ಬಡಿಸಿ,

Friday, September 30, 2016

ಸ್ಪ್ರಿಂಗ್ ರೋಲ್

ಇನ್ನು ಮಕ್ಕಳಿಗೆ ದಸರಾ ರಜಾ ಶುರು. . ಆಗ ಮಕ್ಕಳುಆಟ ಮುಗಿಸಿ ಅಥವಾ ಅವರ ಕ್ಲಾಸ್ ಮುಗಿಸಿ ಬಂದು ಅಮ್ಮ ಹಸಿವೆ ಎಂದಾಗ ಸ್ಪ್ರಿಂಗ್ ರೋಲ್ ಮಾಡಿ ಕೊಡಬಹುದು. ಸ್ಪ್ರಿಂಗ್ ರೋಲ್ ನ ಹೊರಗಿನ ಕವಚವನ್ನು ಮೊದಲೇ ಮಾಡಿಟ್ಟು ಶೀತಾಗಾರದಲ್ಲಿ ಕಾಪಿಟ್ಟುಕೊಳ್ಳಬಹುದು. 

ಮೊದಲಿಗೆ ಸ್ವಲ್ಪ ಮೈದಾ ಹಿಟ್ಟಿಗೆ ಸ್ವಲ್ಪ ಕಾರ್ನ್ ಫ್ಲೋರ್ ಮಿಕ್ಸ್ ಮಾಡಿ ನೀರು ಬೆರೆಸಿ ಗಂಟಾಗದಂತೆ ತೆಳುವಾದ ಹಿಟ್ಟು ತಯಾರಿಸಿ. ನಾನ್ ಸ್ಟಿಕ್ ಕಾವಲಿ ಓಲೆ ಮೇಲಿಡಿ. ಬಿಸಿ ಆದ ಮೇಲೆ ಒಂದು ಬ್ರಶ್ ಅನ್ನು ಹಿಟ್ಟಿನಲ್ಲಿ ಅಡ್ಡಿ ಪೈಂಟ್ ಮಾಡೊತರಹ ಕಾವಲಿ ಮೇಲೆ ಆಡಿಸಿ. ಒಂದಾದನಂತರ ಲಂಬವಾಗಿ ಹಿಟ್ಟನ್ನು ಕಾವಲಿಗೆ ಬ್ರಶ್ ಮಾಡ್ತಾ ಹೋಗಿ. 

ಒಣಗಿದಂತೆ ಕಂಡ ಕೂಡಲೇ ಕಾವಲಿಯಿಂದ ಬಿಡಿಸಿ ಪ್ಲೇಟ್ ಮೇಲೆ ಹಾಕಿ. ಇದಕ್ಕೆ ತೆಳು ಎಣ್ಣೆ ಸವರಿಡಿ . ಇದರ ಮೇಲೆ ಇನ್ನೊಂದು ಪದರ ಮಾಡಿ ಇಡುತ್ತಾ ಹೋಗಿ. ಹೀಗೆ ಕವಚಗಳು ರೆಡಿಯಾದ ಮೇಲೆ ಪ್ಹ್ರಿಜರ್ ನಲ್ಲಿ ಇತ್ತು ಬಿಡಿ. 


ಸ್ಪ್ರಿಂಗ್ ರೋಲ್ ನ ಹೂರಣ : ಕ್ಯಾಬೇಜ್, ದಪ್ಪ  ಮೆಣಸಿನಕಾಯಿ ಕ್ಯಾರಟ್ ಸಣ್ಣಕ್ಕೆ ಕಟ್ ಮಾಡಿಡಿ . ಎಣ್ಣೆಯಲ್ಲಿ ನೀರುಳ್ಳಿ ಬೆಳ್ಳುಳ್ಳಿಬಾಡಿಸಿ, ಇದಕ್ಕೆ ತರಕಾರಿಗಳನ್ನು ಬೆರೆಸಿ  ಉಪ್ಪು ಬೆರೆಸಿ ಎರಡು ನಿಮಿಷ ಕೈಯಾಡಿಸಿ ತಣ್ಣಗಾಗಲು  ಪಕ್ಕಕ್ಕಿಡಿ. 


ಈಗ ಒಂದೊಂದೇ ರೋಲ್ ಗಳನ್ನೂ ಬಿಡಿಸಿ. ಮಧ್ಯದಲ್ಲಿ ತರಕಾರಿ ಮಿಶ್ರಣವನ್ನು ಹಾಕಿ ಹಾಸಿಗೆ ಯಂತೆ ಸುರುಳಿ ಸುತ್ತಿ .

 ಹೀಗೆ ಐದಾರು ಸ್ಪ್ರಿಂಗ್ ರೋಲ್ ಮಾಡಿಡಿ. ಬಿಸಿ ಎಣ್ಣೆಯಲ್ಲಿ  ಪ್ರೈ ಮಾಡಿ. 
ಡಿಪ್ ಮಾಡಲು ಸಾಸ್. ಕೆಂಪು ಮೆಣಸನ್ನು ಬಿಸಿ ನಿರಿ ನಲ್ಲಿ ಹಾಕಿಡಿ. ಮೆದುವಾದ ಮೇಲೆ ಉಪ್ಪು ವಿನೆಗರ್, ಬೆಳ್ಳುಳ್ಳಿ ಸಕ್ಕರೆ ಹಾಕಿ ಮಿಕ್ಸಿ ಯಲ್ಲಿ ಪೇಸ್ಟ್ ಮಾಡಿಕೊಳ್ಳಿ. 
ಬಿಸಿ ಬಿಸಿ ಸ್ಪ್ರಿಂಗ್ ರೋಲ್ ರೆಡಿ ಟು ಸರ್ವ್ 
ರಿಸಿಪಿ : ಫಾರುಖ್ ಅಜಿಜ್ ಅವರ ಬ್ಲಾಗ್ : http://cubesnjuliennes.com/

Sunday, September 18, 2016

ready mix ಗಿಣ್ಣು

ಮೊನ್ನೆ ಶ್ರೀಕಾಂತ ಮಲ್ಲೇಶ್ವರದ ಕಿಣಿ ಮಾಮನ ಅಂಗಡಿಗೆ ಹೋಗಿದ್ದರು. ಅಲ್ಲಿಂದ ಈ ಕಾಮಧೇನು ಗಿಣ್ಣು ಮಿಕ್ಸ್ ತಂದಿದ್ದರು.  
ಇಲ್ಲಿದೆ ನೋಡಿ ಪ್ಯಾಕೆಟ್ಟು ಮತ್ತು ನಾನು ಮಾಡಿದ ಗಿಣ್ಣು. ಏಲಕ್ಕಿ ಮಾತ್ರ ಹಾಕಲಿಲ್ಲ. ಉಳಿದ ತಯಾರಿ ಪ್ಯಾಕೆಟ್ ಹಿಂದುಗಡೆ ನಮೂದಿಸಿದಂತೆ. 
ಅರ್ಧ ಪ್ಯಾಕೆಟ್ ಹಸಿ ಹಾಲಲ್ಲಿ  , ೧೦೦ ಗ್ರಾಮ್ ಸಕ್ಕರೆ ಅಥವಾ ಬೆಲ್ಲ , ಏಲಕ್ಕಿ ಪುಡಿ , ಗಿಣ್ಣು ಪುಡಿ ಗಂಟಾಗದಂತೆ ಮಿಶ್ರ ಮಾಡುವುದು. ೧೫ ನಿಮಿಷ ಹಬೆ ಪಾತ್ರೆಯಲ್ಲಿ ಬೇಯಿಸುವುದು. ತಣಿದ ನಂತರ ಫ್ರಿಜ್  ನಲ್ಲಿ ಹಾಕಿಡುವುದು . ನಾನು ಎರಡು ಮೂರೂ ದಿನ ಉಳಿಯುತ್ತೆ ಅಂದುಕೊಂಡರೆ  ಒಂದೇ ಒಂದು ಪೀಸ್ ಉಳಿದಿದೆ. ನೀವು ತಂದುಕೊಂಡು ಮಾಡಿಕೊಂಡು ತಿನ್ಕಳ್ಳಿ

ಆನ್ ಲೈನ್ ನಲ್ಲಿ ಆರ್ಡರ್ ಮಾಡಲು ಕೆಳಗಿನ ಕೊಂಡಿ ಬಳಸಿ
http://www.ithiha.com/

Thursday, September 1, 2016

ಪಾತ್ತೊಳಿ (ಅರಸಿನ ಎಲೆ ಕಡುಬು)

ನನ್ನ ಮಗಳು ಕೊಂಕಣಿ ಅಡುಗೆಗಳನ್ನು ರೆಕಾರ್ಡ್ ಮಾಡುತ್ತಾಳಂತೆ. ವಿಡಿಯೋ ಕೊಂಕಣಿಯಲ್ಲಿದ್ದರು ಅದಕ್ಕೆ ಇಂಗ್ಲಿಷ್ ಸಬ ಸ್ಕ್ರಿಪ್ಟ್ ಇದೆ. ಆದ್ದರಿಂದ ಈ ತಿಂಡಿಗಳನ್ನು ಯಾರೇ  ಮಾಡಲು ಪ್ರಯತ್ನ ಪಡಬಬಹುದು.   ಮೊದಲನೆಯ ಪ್ರಯತ್ನ.
ಕೆಳಗಿನ  ಕೊಂಡಿಯನ್ನು ಕ್ಲಿಕ್ಕಿಸಿ