Friday, November 18, 2016

ಚೀನಿಕಾಯಿ ಗೊಜ್ಜು/ಚಟ್ನಿ

ತೆಂಗಿನಕಾಯಿ ತುರಿದ ಚೀನಿಕಾಯಿ ಸಮ ಪ್ರಮಾಣ. ನಾನಿಲ್ಲಿ ಒಂದು ದೊಡ್ಡ ಟೇಬಲ್ ಚಮಚ ತೆಗೊಂಡಿದ್ದೀನಿ, ಮತ್ತು ಬೇಕಾದಷ್ಟು ಹಸಿಮೆಣಸಿನಕಾಯಿ 

ಎಣ್ಣೆಯಲ್ಲಿ ಜೀರಿಗೆ ಹಿಂಗು ಹಸಿಮೆಣಸಿನಕಾಯಿ ಬಾಡಿಸಿ. ಇದಕ್ಕೆ ತುರಿದ ಚೀನಿಕಾಯಿ ಆಮೇಲೆ ಕಾಯಿ ತುರಿ  ಬೆರೆಸಿ ಕೈಯಾಡಿಸಿ. 


 ತಣ್ಣಗಾದ ಮೇಲೆ ಚಿಕ್ಕ ತುಂಡು ಹುಣಸೆ ಹಾಕಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ . ಉಪ್ಪು ಬೆರೆಸಿ.
ಒಗ್ಗರಣೆಗೆ ಉದ್ದಿನಬೇಳೆ, ಜೀರಿಗೆ ಸಾಸಿವೆ, ಕರಿಬೇವು, ಕೆಂಪು ಮೆಣಸು ಹಾಕಿ 

ಒಗ್ಗರಣೆ ಬೆರೆಸಿ. ಊಟಕ್ಕೆ ಬಡಿಸುವ ಸ್ವಲ್ಪ ಮೊದಲು ಮೊಸರು ಸೇರಿಸಿ ಮಿಕ್ಸ್ ಮಾಡಿ. 
ಬಿಸಿ ಬಿಸಿ ಅನ್ನಕ್ಕೆ ಚಪಾತಿಗೆ ಒಳ್ಳೆಯ ಸಾಥ್ .ಸುಲಭ ಮತ್ತು ರುಚಿಕರ 

Saturday, November 5, 2016

ಬರಗು ಖಿಚಡಿ (proso millet sweet khichdi)

 ನಾನು ಇತ್ತೀಚಿಗೆ ಅನ್ನದ ಬಳಕೆ ಕಡಿಮೆ ಮಾಡಿ ಸಿರಿ ಧಾನ್ಯದ ಮೊರೆ ಹೊಕ್ಕಿದ್ದೇನೆ.
ನಿನ್ನೆ ಖಿಚಡಿ ಮಾಡಿದ್ದೆ.
ಬೇಕಾಗುವ ಸಾಮಗ್ರಿ:
ಅರ್ಧ ಕಪ್ ಹೆಸರು ಬೇಳೆ , ಒಂದು ಕಪ್ ಸಿರಿ/ಕಿರು ಧಾನ್ಯ ಯಾವುದಾದರೂ, ಒಂದು ಕಳಿತ ನೇಂದ್ರ ಬಾಳೆಹಣ್ಣು , ಒಂದು  ಕಪ್ ತಾಜಾ ತೆಂಗಿನ ಕಾಯಿತುರಿ , ಒಂದು ವರೆ ಕಪ್ ಬೆಲ್ಲದ ಹುಡಿ, ಸ್ವಲ್ಪ ತುಪ್ಪ , ಗೋಡಂಬಿ ದ್ರಾಕ್ಷಿ ,ಏಲಕ್ಕಿ


ಹೆಸರು ಬೇಳೆ ಮತ್ತು ಧಾನ್ಯವನ್ನು ಸಣ್ಣ ಉರಿಯಲ್ಲಿ ಪರಿಮಳ ಬರುವ ತನಕ ಅಥವಾ ಬೇಳೆ ಗೆ ಬಂಗಾರದ ಬಣ್ಣ ಬರುವ ತನಕ ಬಾಣಲೆಯಲ್ಲಿ ಹುರಿಯಿರಿ.
ತಣ್ಣಗಾದ ನಂತರ ಮೂರು ಕಪ್ ನೀರಲ್ಲಿ ಕುಕ್ಕರ್ ನಲ್ಲಿ ಬೇಯಿಸಿ .( ಎರಡಿ ಸಿಟಿ ಕೂಗಿದ ಮೇಲೆ ಐದು ನಿಮಿಷ ಮಂದ ಉರಿಯಲ್ಲಿ ಬೇಯಲಿ. )
 ಬೆಲ್ಲದ ಪಾಂಕ ಮಾಡಿ ಅದಕ್ಕೆ ಕಾಯಿ ತುರಿ ಬೆರೆಸಿ . ನೇಂದ್ರ ಬಾಳೆ ಯನ್ನು ಮ್ಯಾಶ್ ಮಾಡಿ ಬೆರೆಸಿ.
ಇದಕ್ಕೆ ಬೇಯಿಸಿದ ಪದಾರ್ಥ ಹಾಕಿ , ಮುದ್ದೆ  ಯಾಗುವ ತನಕ ಒಲೆ ಮೇಲಿಡಿ. ಇದಕ್ಕೆ ತುಪ್ಪದಲ್ಲಿ ಕರಿದ ಗೋಡಂಬಿ ದ್ರಾಕ್ಷಿ ಬೆರೆಸಿ , ಏಲಕ್ಕಿ ಪುಡಿ ಬೆರೆಸಿ. ತಟ್ಟೆಯಲ್ಲಿ ಸ್ಪ್ರೆಡ್ ಮಾಡಿ ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿ, ಚಕ್ರದಾಕಾರದಲ್ಲಿ ಕತ್ತರಿಸಿದ  ಬಾಳೆ ಯ ಹಣ್ಣಿನ ಜತೆ ಬಡಿಸಿ,

Friday, September 30, 2016

ಸ್ಪ್ರಿಂಗ್ ರೋಲ್

ಇನ್ನು ಮಕ್ಕಳಿಗೆ ದಸರಾ ರಜಾ ಶುರು. . ಆಗ ಮಕ್ಕಳುಆಟ ಮುಗಿಸಿ ಅಥವಾ ಅವರ ಕ್ಲಾಸ್ ಮುಗಿಸಿ ಬಂದು ಅಮ್ಮ ಹಸಿವೆ ಎಂದಾಗ ಸ್ಪ್ರಿಂಗ್ ರೋಲ್ ಮಾಡಿ ಕೊಡಬಹುದು. ಸ್ಪ್ರಿಂಗ್ ರೋಲ್ ನ ಹೊರಗಿನ ಕವಚವನ್ನು ಮೊದಲೇ ಮಾಡಿಟ್ಟು ಶೀತಾಗಾರದಲ್ಲಿ ಕಾಪಿಟ್ಟುಕೊಳ್ಳಬಹುದು. 

ಮೊದಲಿಗೆ ಸ್ವಲ್ಪ ಮೈದಾ ಹಿಟ್ಟಿಗೆ ಸ್ವಲ್ಪ ಕಾರ್ನ್ ಫ್ಲೋರ್ ಮಿಕ್ಸ್ ಮಾಡಿ ನೀರು ಬೆರೆಸಿ ಗಂಟಾಗದಂತೆ ತೆಳುವಾದ ಹಿಟ್ಟು ತಯಾರಿಸಿ. ನಾನ್ ಸ್ಟಿಕ್ ಕಾವಲಿ ಓಲೆ ಮೇಲಿಡಿ. ಬಿಸಿ ಆದ ಮೇಲೆ ಒಂದು ಬ್ರಶ್ ಅನ್ನು ಹಿಟ್ಟಿನಲ್ಲಿ ಅಡ್ಡಿ ಪೈಂಟ್ ಮಾಡೊತರಹ ಕಾವಲಿ ಮೇಲೆ ಆಡಿಸಿ. ಒಂದಾದನಂತರ ಲಂಬವಾಗಿ ಹಿಟ್ಟನ್ನು ಕಾವಲಿಗೆ ಬ್ರಶ್ ಮಾಡ್ತಾ ಹೋಗಿ. 

ಒಣಗಿದಂತೆ ಕಂಡ ಕೂಡಲೇ ಕಾವಲಿಯಿಂದ ಬಿಡಿಸಿ ಪ್ಲೇಟ್ ಮೇಲೆ ಹಾಕಿ. ಇದಕ್ಕೆ ತೆಳು ಎಣ್ಣೆ ಸವರಿಡಿ . ಇದರ ಮೇಲೆ ಇನ್ನೊಂದು ಪದರ ಮಾಡಿ ಇಡುತ್ತಾ ಹೋಗಿ. ಹೀಗೆ ಕವಚಗಳು ರೆಡಿಯಾದ ಮೇಲೆ ಪ್ಹ್ರಿಜರ್ ನಲ್ಲಿ ಇತ್ತು ಬಿಡಿ. 






ಸ್ಪ್ರಿಂಗ್ ರೋಲ್ ನ ಹೂರಣ : ಕ್ಯಾಬೇಜ್, ದಪ್ಪ  ಮೆಣಸಿನಕಾಯಿ ಕ್ಯಾರಟ್ ಸಣ್ಣಕ್ಕೆ ಕಟ್ ಮಾಡಿಡಿ . ಎಣ್ಣೆಯಲ್ಲಿ ನೀರುಳ್ಳಿ ಬೆಳ್ಳುಳ್ಳಿಬಾಡಿಸಿ, ಇದಕ್ಕೆ ತರಕಾರಿಗಳನ್ನು ಬೆರೆಸಿ  ಉಪ್ಪು ಬೆರೆಸಿ ಎರಡು ನಿಮಿಷ ಕೈಯಾಡಿಸಿ ತಣ್ಣಗಾಗಲು  ಪಕ್ಕಕ್ಕಿಡಿ. 


ಈಗ ಒಂದೊಂದೇ ರೋಲ್ ಗಳನ್ನೂ ಬಿಡಿಸಿ. ಮಧ್ಯದಲ್ಲಿ ತರಕಾರಿ ಮಿಶ್ರಣವನ್ನು ಹಾಕಿ ಹಾಸಿಗೆ ಯಂತೆ ಸುರುಳಿ ಸುತ್ತಿ .

 ಹೀಗೆ ಐದಾರು ಸ್ಪ್ರಿಂಗ್ ರೋಲ್ ಮಾಡಿಡಿ. ಬಿಸಿ ಎಣ್ಣೆಯಲ್ಲಿ  ಪ್ರೈ ಮಾಡಿ. 
ಡಿಪ್ ಮಾಡಲು ಸಾಸ್. ಕೆಂಪು ಮೆಣಸನ್ನು ಬಿಸಿ ನಿರಿ ನಲ್ಲಿ ಹಾಕಿಡಿ. ಮೆದುವಾದ ಮೇಲೆ ಉಪ್ಪು ವಿನೆಗರ್, ಬೆಳ್ಳುಳ್ಳಿ ಸಕ್ಕರೆ ಹಾಕಿ ಮಿಕ್ಸಿ ಯಲ್ಲಿ ಪೇಸ್ಟ್ ಮಾಡಿಕೊಳ್ಳಿ. 
ಬಿಸಿ ಬಿಸಿ ಸ್ಪ್ರಿಂಗ್ ರೋಲ್ ರೆಡಿ ಟು ಸರ್ವ್ 
ರಿಸಿಪಿ : ಫಾರುಖ್ ಅಜಿಜ್ ಅವರ ಬ್ಲಾಗ್ : http://cubesnjuliennes.com/

Sunday, September 18, 2016

ready mix ಗಿಣ್ಣು

ಮೊನ್ನೆ ಶ್ರೀಕಾಂತ ಮಲ್ಲೇಶ್ವರದ ಕಿಣಿ ಮಾಮನ ಅಂಗಡಿಗೆ ಹೋಗಿದ್ದರು. ಅಲ್ಲಿಂದ ಈ ಕಾಮಧೇನು ಗಿಣ್ಣು ಮಿಕ್ಸ್ ತಂದಿದ್ದರು.  
ಇಲ್ಲಿದೆ ನೋಡಿ ಪ್ಯಾಕೆಟ್ಟು ಮತ್ತು ನಾನು ಮಾಡಿದ ಗಿಣ್ಣು. ಏಲಕ್ಕಿ ಮಾತ್ರ ಹಾಕಲಿಲ್ಲ. ಉಳಿದ ತಯಾರಿ ಪ್ಯಾಕೆಟ್ ಹಿಂದುಗಡೆ ನಮೂದಿಸಿದಂತೆ. 
ಅರ್ಧ ಪ್ಯಾಕೆಟ್ ಹಸಿ ಹಾಲಲ್ಲಿ  , ೧೦೦ ಗ್ರಾಮ್ ಸಕ್ಕರೆ ಅಥವಾ ಬೆಲ್ಲ , ಏಲಕ್ಕಿ ಪುಡಿ , ಗಿಣ್ಣು ಪುಡಿ ಗಂಟಾಗದಂತೆ ಮಿಶ್ರ ಮಾಡುವುದು. ೧೫ ನಿಮಿಷ ಹಬೆ ಪಾತ್ರೆಯಲ್ಲಿ ಬೇಯಿಸುವುದು. ತಣಿದ ನಂತರ ಫ್ರಿಜ್  ನಲ್ಲಿ ಹಾಕಿಡುವುದು . ನಾನು ಎರಡು ಮೂರೂ ದಿನ ಉಳಿಯುತ್ತೆ ಅಂದುಕೊಂಡರೆ  ಒಂದೇ ಒಂದು ಪೀಸ್ ಉಳಿದಿದೆ. ನೀವು ತಂದುಕೊಂಡು ಮಾಡಿಕೊಂಡು ತಿನ್ಕಳ್ಳಿ

ಆನ್ ಲೈನ್ ನಲ್ಲಿ ಆರ್ಡರ್ ಮಾಡಲು ಕೆಳಗಿನ ಕೊಂಡಿ ಬಳಸಿ
http://www.ithiha.com/

Thursday, September 1, 2016

ಪಾತ್ತೊಳಿ (ಅರಸಿನ ಎಲೆ ಕಡುಬು)

ನನ್ನ ಮಗಳು ಕೊಂಕಣಿ ಅಡುಗೆಗಳನ್ನು ರೆಕಾರ್ಡ್ ಮಾಡುತ್ತಾಳಂತೆ. ವಿಡಿಯೋ ಕೊಂಕಣಿಯಲ್ಲಿದ್ದರು ಅದಕ್ಕೆ ಇಂಗ್ಲಿಷ್ ಸಬ ಸ್ಕ್ರಿಪ್ಟ್ ಇದೆ. ಆದ್ದರಿಂದ ಈ ತಿಂಡಿಗಳನ್ನು ಯಾರೇ  ಮಾಡಲು ಪ್ರಯತ್ನ ಪಡಬಬಹುದು.   ಮೊದಲನೆಯ ಪ್ರಯತ್ನ.
ಕೆಳಗಿನ  ಕೊಂಡಿಯನ್ನು ಕ್ಲಿಕ್ಕಿಸಿ

Wednesday, July 27, 2016

ಕೆಸುವಿನೆಲೆಯ ದಂಟು ಮತ್ತು ಹಲಸಿನ ಬೀಜ ಹಾಕಿ ಪಲ್ಯ

ಹಳೆಯ ಕಾಲದಲ್ಲಿ ಜೋರು  ಮಳೆಗಾಲದಲ್ಲಿ ರಸ್ತೆ ಸಂಪರ್ಕ ಇರುತ್ತಿರಲಿಲ್ಲ. ತೀರಾ ತುರ್ತು ಪರಿಸ್ಥಿತಿ ಇರದಿದ್ದಲ್ಲಿ ಯಾರು ಮನೆಯಿಂದ ಆಚೆ ಹೋಗುತ್ತಿರಲಿಲ್ಲ. ಊಟ ತಿಂಡಿಗೆ ಮನೆಯಲ್ಲೇ ಬೆಳೆದ ಸೊಪ್ಪು ತರಕಾರಿ ಬೆಳೆಸುತ್ತಿದ್ದರು. ಅಥವಾ ಸೀಸನ್ ನಲ್ಲಿ ಸಿಗುವ ತರಕಾರಿಗಳನ್ನು  ಮಾಳಿಗೆಯ ಮೇಲೆ ಚಂದ  ಮಾಡಿ ಜೋಡಿಸುತ್ತಿದ್ದರು. ನನ್ನ ಅಜ್ಜಿಯ ಮನೆಯಲ್ಲಿ ಅಡಿಗೆ ಮನೆಗೆ ಒಂದು ಅಟ್ಟ  ಇತ್ತು. ಆಗ ಎಲ್ಲ ಸೌದೆ  ಒಲೆಗಳು. ಅಲ್ಲಿಂದ ಹೊಗೆಯೆಲ್ಲ ಅಟ್ಟಕ್ಕೆ. ಅಲ್ಲಿ ಕಾಪಿಡುತ್ತಿದ್ದ, ಮನೆಯಲ್ಲೇ ತಯಾರಿಸಿದಂತಹ  ಹಪ್ಪಳ ಸಂಡಿಗೆಗೆಲ್ಲಾ ಹೊಗೆಯ ವಾಸನೆ. ಅಲ್ಲದೆ ಸಾಂಬಾರ್ ಸೌತೆ, ಸುವರ್ಣ ಗಡ್ಡೆಗಳು , ಕುಂಬಳಕಾಯಿಗಳನ್ನು ಮಳೆಗಾಲಕ್ಕೆ ಸೇವ್ ಮಾಡಿಡುತ್ತಿದ್ದರು. ಉಳಿದಂತೆ, ಬಸಳೆ, ಸೌತೆ, ತೊಂಡೆಕಾಯಿ , ಹರಿವೆ ಸೊಪ್ಪು, ಇವೆಲ್ಲ ಮನೆ ಅಂಗಳ ಅಥವಾ ಹಿತ್ತಲಲ್ಲಿ ಬೆಳೆಸುತ್ತಿದ್ದರು.  ಈಗ ಅದೆಲ್ಲ ನೆನಪು ಮಾತ್ರ. :-) 

ಮಳೆಗಾಲದಲ್ಲಿ ಕೆಸುವಿನ ಎಲೆ ಡಾಳಾಗಿ ಬೆಳೆಯುತ್ತವೆ. ಹಲಸಿನ ಹಣ್ಣು ಅದರ ಬೀಜ ಕೂಡ ಸಿಗುತ್ತವೆ . ಈ ಬೀಜಕ್ಕೆ ಸ್ವಲ್ಪ ಮಣ್ಣು ಮೆತ್ತಿ ಇಟ್ಟರೆ  ಹಲಸಿನ ಹಣ್ಣಿನ ಸೀಸನ್ ಮುಗಿದರು ತಿನ್ನ ಬಹುದು, ಈ ಪಲ್ಯ ಈಗ ಮಾಡುವವರು ಅತಿ ವಿರಳ ಅನ್ನ  ಬಹುದು. especially ಬೆಂಗಳೂರಿನಂತಹ ಊರಲ್ಲಿ. ನಾವು ದಕ್ಷಿಣ ಕನ್ನಡದಲ್ಲಿ ಇವರ ಬ್ಯಾ೦ಕ್  ನೌಕರಿಯ ನಿಮಿತ್ತ ಅಲ್ಲೆಲ್ಲ ಇದ್ದಾಗ ಇವನ್ನೆಲ್ಲ ತುಂಬಾ ಮಾಡುತ್ತಿದ್ದೆವು. ಈ ಕೆಸುವಿನ ಎಲೆಗಳನ್ನು ನಾವು ಬೆಳಗಾವಿಯ ಒಬ್ಬರ ತೋಟದಿಂದ ತಂದಿದ್ದು. ಕಪ್ಪು ಕೆಸುವಿನ ಎಲೆಯ ದಂಟು ಗಂಟಲಿಗೆ ಕೆರೆತ ಉಂಟು ಮಾಡುವುದಿಲ್ಲ. 

ಮಳೆಗಾಲದಳ್ಳಿ  ಕೆಸುವಿನ ಎಲೆ ತಿಂದ ಮೈಯಲ್ಲಿಶಾಖ ಉತ್ಪನ್ನ ಆಗಿ ಮಳೆಗಾಲದ ಕಾಯಿಲೆಗಳನ್ನು ದೂರವಿಡ ಬಹುದೆಂದು ಹೇಳುತ್ತಾರೆ. ಆದರೆ ಬಾಯಿರುಚಿಗೆಇದನ್ನು ಯಾವಾಗ ಬೇಕು ಆವಾಗ ಮಾಡಿ ತಿನ್ನ ಬಹುದು :-) 


ಈಗ ಪಲ್ಯ ಮಾಡುವ ವಿಧಾನಕ್ಕೆ ಬರುವ. 

ಕಪ್ಪು ಕೆಸುವಿನ ಎಳೆಯ ದಂಟು, ನಾರು ತೆಗೆದು ಚಿಕ್ಕ ತುಂಡುಗಳನ್ನು ಮಾಡಿದ್ದು   - ಅರ್ಧ ಕಪ್ 
ಉಪ್ಪು ಹಾಕಿ ಬೇಯಿಸಿದ , ಜಜ್ಜಿ ಸಿಪ್ಪೆ ತೆಗೆದ ಹಲಸಿನ ಕಾಯಿ ಬೀಜ- ಅರ್ಧ ಕಪ್ 
ಒಗ್ಗರಣೆಗೆ ಬೆಳ್ಳುಳ್ಳಿ, ಕೆಂಪು ಮೆಣಸಿನ ಚೂರು , ಬೆಲ್ಲ, ಹುಣಸೆ ನೀರು. 

ಹುಣಸೆ ಹಣ್ಣಿಗೆ ಸ್ವಲ್ಪ ನೀರು ಹಾಕಿಡಿ 

ಎಣೆಯಲ್ಲಿ ಬೆಳ್ಳುಳ್ಳು ವಗ್ಗರಿಸಿ , ಕೆಂಪಗಾದಾಗ ಕೆಂಪು ಮೆಣಸಿನ ಫ್ಲೆಕ್ಸ್ ಹಾಕಿ, ಬೇಯಿಸಿದ ಹಲಸಿನ ಬೀಜ ಹಾಕಿ ಕೈಯಾಡಿಸಿ. ಆಮೇಲೆ ದಂಟುಗಳನ್ನು ಬೆರಸಿ , ಉಪ್ಪು ಹುಣಸೆ ನೀರು ಹಾಕಿ (ಉಪ್ಪು ಹಲಸಿನ ಬೀಜಕ್ಕೆ ಹಾಕಿದ್ದರಿಂದ ರುಚಿ ನೋಡಿ ಬೇಕಿದ್ದಲ್ಲಿ ಮಾತ್ರ ಉಪ್ಪು ಬೆರೆಸಿ), ಬೆಲ್ಲ ಹಾಕಿ ಮುಚ್ಚಿಡಿ. ಸ್ವಲ್ಪ ಹೊತ್ತಿಗೆ ದಂಟುಗಳು ಮೃದುವಾಗುತ್ತ್ತವೆ. ಒಲೆಯಿಂದ ತೆಗೆದಿಡಿ. ಪಲ್ಯ ರೆಡಿ.  

ಉಪ್ಪು, ಬೆಲ್ಲ ಹುಣಸೆ ಹುಳಿ  ಸರಿಯಾದ ಮಿಶ್ರಣವಾಗಬೇಕು. ಆಗ ಈ ಪಲ್ಯಕ್ಕೆ ರುಚಿ. ಬಿಸಿ ಅನ್ನದೊಂದಿಗೆ ಮಿಕ ಮಾಡಿ , ಅಥವಾ  ಸೆಡ್ ಡಿಶ್ ಆಗಿಯೂ ಉಪಯೋಗಿಸ ಬಹುದು 

Thursday, March 10, 2016

ಟೊಮೇಟೊ ಗೊಜ್ಜು /ಚಟ್ನಿ

ಟಿಂಬಕ್ಟು ಕಲೆಕ್ಟಿವ್ಸ್ ಅಂತೊಂದು ಏನ್ ಜಿ ಓ ಇದೆ. ಅಲ್ಲಿ ತೋರಿಸಿದ ವಿಡಿಯೋ ನಲ್ಲಿತ್ತು ಈ ಚಟ್ನಿ ಅಥವಾ ಗೊಜ್ಜು ಮಾಡುವ ಬಗೆ 
ಬೇಕಾಗುವ ಸಾಮಾನು : ಮೂರು ಹದ ಗಾತ್ರದ ಟೊಮೇಟೋ , 4-5 ಅಥವಾ ಎಷ್ಟು ಖಾರ ಬೇಕೋ ಅಷ್ಟು ಹಸಿಮೆಣಸಿನಕಾಯಿ. ಜೀರಿಗೆ, ಬೆಳ್ಳುಳ್ಳಿ , ಸ್ವಲ್ಪ -ಸಣ್ಣಕ್ಕೆ ಕತ್ತರಿಸಿದ ಹಸಿಮೆಣಸಿನಕಾಯಿ. 

ಅವರು ಟೊಮೆಟೋ ಮತ್ತು ಹಸಿಮೆಣಸಿನ ಕಾಯಿಗಳನ್ನು ಕೆಂಡದಲ್ಲಿ ಸುಟ್ಟಿಟ್ಟುಕೊಂಡಿದ್ದರು. ನಾನು ಹೀಗೆ, ನನ್ನ ಬಲಿಯಿರುವ ಪ್ರೋಟಾ ಬೇಯಿಸುವ ಗ್ರಿಲ್ ಮೇಲೆ ಮಾಡಿದೆ. 

ಟೊಮೆಟೊ ಮತ್ತು ಹಸಿಮೆಣಸಿನಕಾಯಿ ಕಂದು ಬಣ್ಣಕ್ಕೆ ಬಂದೊಡನೆ ಅದನ್ನು ಗ್ಯಾಸ್ ಮೇಲಿಂದ ಇಳಿಸಿ, ಪ್ಲೇಟ್ ಮೇಲಿಟ್ಟು ಅವನ್ನು ದೊಡ್ಡ ಪಾತ್ರೆಯೊಂದರಿಂದ ಮುಚ್ಚಿಡಿ. ಟೊಮೇಟೊ ಇದರಿಂದ ಇನ್ನಷ್ಟು ಬೇಯುತ್ತೆ. ತಣ್ಣಗಾದ ಮೇಲೆ ಟೊಮೇಟೊ ಸಿಪ್ಪೆ ತೆಗೆದು , ಹಸಿಮೆಣಸಿನಕಾಯಿಯೊಂದಿಗೆ ಮ್ಯಾಶ್ ಮಾಡಿದಿ. 
ಒಂದು ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿ . ಇದಕ್ಕೆ ಜೀರಿಗೆ ಒಗ್ಗರಣೆಗೆ ಹಾಕಿ. ಜಜ್ಜಿದ ಬೆಳ್ಳುಳ್ಳಿ ಹಾಕಿ , ಕೊನೆಗೆ ಮ್ಯಾಶ್ ಮಾಡಿದ ಮಿಕ್ಷಚರ್ ಬೆರೆಸಿ. ಉಪ್ಪು , ಚಿಟಿಕೆ ಸಕ್ಕರೆ ಬೆರೆಸಿ. ಕೊನೆಗೆ ಹಸಿ ಇರುಳ್ಳಿ ಮತ್ತು ಕೊತ್ತಂಬರಿ ಸೊಪ್ಪು ಬೆರೆಸಿ. 
ರಾಗಿ ರೊಟ್ಟಿ ಅಥವಾ ಪರಾಥಾ /ಫುಲ್ಕಾ ಜತೆ ರುಚಿಕರವಾದ ಗೊಜ್ಜು /ಚಟ್ನಿ ರೆಡಿ. 

:-)

Saturday, February 6, 2016

ಮೂಲಂಗಿ ಸೊಪ್ಪು ಬಳಸಿ ಪಕೋಡಾ

ಮೂಲಂಗಿ ಸೊಪ್ಪು ಬೇಕಂದ್ರೆ ಪುಕ್ಕಟೆಯಾಗಿ ಕೊಡುತ್ತಾರೆ ತರಕಾರಿಯವರು. ದುಡ್ಡು ಕೊಡಲು ಹೋದರೆ 'ಅಯ್ಯೋ ಮೂಲಂಗಿ ಮಾತ್ರ ತೆಗೊಂಡು ಹೋಗ್ತಾರೆ ಜನ ಎಲೆ ಹೇಗೂ ಬಿಸಾಕೋದು, ಅದಕ್ಯಾಕೆ ದುಡ್ಡು' ಅಂತಾರೆ. :-)

ತುಂಬಾ ಸುಲಭ. ಮೂಲಂಗಿ ಎಲೆಗಳನ್ನು ಚೆನ್ನಾಗಿ ತೊಳೆದು ಚಿಕ್ಕದಾಗಿ ಕತ್ತರಿಸಿ. ನೀರು ಚೆನ್ನಾಗಿ ಬಸಿದಿರಬೇಕು. ಇದಕ್ಕೆ ಉಪ್ಪು , ಕೆಂಪು ಮೆಣಸಿನ ಪುಡಿ, ಸ್ವಲ್ಪ ಹಸಿ ಮೆಣಸಿನಕಾಯಿ ಚಿಕ್ಕದಾಗಿ ಕತ್ತರಿಸಿದ್ದು, ಹೆಚ್ಚೇ ನೀರುಳ್ಳಿ ಚಿಕ್ಕದಾಗಿ ಕತ್ತರಿಸಿದ್ದು, ಕಡಲೆ ಹಿಟ್ಟು ಬೇಕಾದಷ್ಟು , ಒಂದು ಟೇಬಲ್ ಚಮಚ ಅಕ್ಕಿ ಹಿಟ್ಟು, ಸ್ವಲ್ಪ ಜೀರಿಗೆ, ೪-೫ ಕೊತ್ತಂಬರಿ ಕ್ರಷ್ (crush)ಮಾಡಿದ್ದು ,. ಇವಷ್ಟನ್ನೂ ಚೆನ್ನಾಗಿ ಮಿಕ್ಸ್ ಮಾಡಿ. ಉಂಡೆ ಕಟ್ಟಿ ಬಿಸಿ ಎಣ್ಣೆಯಲ್ಲಿ ಬಿಡಿ. ಗರಮಾ ಗರಂ ಪಕೋಡಾ ರೆಡಿ.


Wednesday, January 27, 2016

ದಾಲ್ ಬಾಟಿ - ರಾಜಸ್ಥಾನಿ ಅಡುಗೆ

ಹಲವಾರು ವರ್ಷಗಳ ಹಿಂದೆ ನಾವು ದೆಹಲಿ, ರಾಜಸ್ಥಾನ್ ಟೂರ್ ಹಾಕಿಕೊಂಡಿದ್ದೆವು. ದೆಹಲಿಯಿಂದ ಗಾಡಿ ಮಾಡಿಕೊಂಡು ಆಗ್ರಾ, ಉದೈಪುರ್ , ರಣಕಪುರ್ , ಜೈಪುರ್ ನಿಂದ ಮೌಂಟ್ ಅಬು ತನಕ ಹೋಗಿ ಬಂದಿದ್ದೆವು. ಒಟ್ಟು ಹದಿನೈದು ದಿನದ ಟೂರ್. ಜೈಪುರ್ ನಲ್ಲಿ ಹೀಗೆ ಒಂದು ದಿನ ಜೋರು ಹಸಿವು. ಜೈಪುರ್ ದಾಟಿದ ನಂತರದ ಹಳ್ಳಿ ಅದು. ಅಲ್ಲೊಂದು ಸಣ್ಣ ದುಕಾನು . ಅಲ್ಲಿ 'ಇಲ್ಲಿ ದಾಲ್ ಬಾಟಿ ಚುರ್ಮಾ ಸಿಗುತ್ತದೆ' ಅಂತ ಹಿಂದಿಯಲ್ಲಿ ಬೋರ್ಡ್ ಹಾಕಿದ್ದರು. ನಮಗೋ ಕುತೂಹಲ. ನಮ್ಮ ಕುತೂಹಲ ನೋಡಿ ಅಂಗಡಿಯಾಕೆ ಖುಶಿಯಿಂದ ನಮಗೋಸ್ಕರ ಬಿಸಿ ಬಿಸಿ ಬಾಟಿ ಮಾಡಿಕೊಟ್ಟಳು. ಏನಿಲ್ಲ ಚಪಾತಿ ಹಿಟ್ಟು. ಅದನ್ನು ಗೋಲ ಆಕಾರ ಮಾಡಿ ಇದ್ದಿಲು ಒಲೆಯಲ್ಲಿ ಹಾಕಿ ಬೇಯಿಸುವುದು. ಬೆಂದ ಮೇಲೆ ಅದನ್ನು ಪುಡಿ ಮಾಡಿ ಅದರ ಮೇಲೆ ದಾಲ್ ಸುರಿದು ತುಪ್ಪದ ಜತೆ ತಿನ್ನುವುದು. ನಮಗಂತೂ ತುಂಬಾ ರುಚಿ ಅನ್ನಿಸ್ತು. 
ಇಲ್ಲಿನ ಗಾಂಧಿ ನಗರ ದ ಸುಖ ಸಾಗರ್ ನಲ್ಲಿ ಸಿಗುತ್ತದೆ. ಆದರೆ ಅದು ನಮಗಷ್ಟು ಇಷ್ಟ ಆಗಲಿಲ್ಲ ಹಾಗಾಗಿ ಮನೆಯಲ್ಲೇ ಮಾಡಿಕೊಳ್ಳುವುದನ್ನು ಕಲಿತಿದ್ದೇವೆ, 
ಬಾಟಿ ಮಾಡುವ ವಿದಾನ: ಮಜ್ಜಿಗೆಗೆ ಸ್ವಲ್ಪ್ಲ ಸೋಡಾ ಪುಡಿ ಉಪ್ಪು ಚಿಟಿಕೆ ಸಕ್ಕರೆ ಬೆರೆಸಿ. ಅವೆಲ್ಲ ಕರಗಿದ ಮೇಲೆ ಗೋದಿ ಹಿಟ್ಟು ಬೇಕಾದಷ್ಟು ನೀರು ಬೆರೆಸಿ ಮಾಮೂಲಿ ಚಪಾತಿ ಹಿಟ್ಟಿಗಿಂತ ಸ್ವಲ್ಪ ಸಾಫ್ಟ್ ಕಣಕ ತಯಾರಿಸಿ. ಇದಕ್ಕೆ ಎರಡು ಚಮಚ ಎಣ್ಣೆ ಹಚ್ಚಿಡಿ.  ಹತ್ತರಿಂದ ಮೂವತ್ತು ನಿಮಿಷ ಹಾಗೆ ಇಡಿ. ಆಮೇಲೆ ಸಣ್ಣ ಉಂಡೆ ಗಾತ್ರದ ಹಿಟ್ಟು ತಯಾರಿಸಿ. 
ನಿಮ್ಮ ಬಾರ್ಬೇಕ್ಯು ರೆಡಿ ಮಾಡಿಕೊಳ್ಳಿ . ನಾನು ತೆಂಗಿನ ಚಿಪ್ಪಿನಿಂದ ಬೆಂಕಿ ತಯಾರಿಸುತ್ತೇನೆ.( ಡೀಪ್ ಫ್ರೈ ಮಾಡಿದ ಎಣ್ಣೆಯನ್ನು ನಾನು ಪುನಃ ಬಳಸಲ್ಲ ಅವನ್ನೆಲ ಬಾಟಲಿಯಲ್ಲಿ ಶೇಖರಿಸಿ ಹಲಸಿನ ಹಣ್ಣು ಕಟ್ ಮಾಡುವಾಗ ಕೈ ಗೆ ಹಚ್ಚಲು, ಸಾಂಬ್ರಾಣಿ ಗದ್ದೆಯ ಸಿಪ್ಪೆ ತೆಗೆಯುವಾಗ ಅಥವಾ ಬಾರ್ಬೇಕ್ಯು ಬೆಂಕಿ ಹಚ್ಚಲು ಉಪಯೋಗಿಸುತ್ತೇನೆ. )
ಹದವಾದ ಕೆಂಡ ತಯಾರಾದ ಮೇಲೆ ಉಂಡೆಗಳನ್ನು ಗ್ರಿಲ್ ಮೇಲಿರಿಸಿ. ಕೆಂಬಣ್ಣಕ್ಕೆ ತಿರುಗಿದೊಡನೆ ಇನ್ನೊಂದು ಬದಿ ಕಾಯಿಸಿ. ಬಿಸಿ ಬಿಸಿಯಿರುವಾಗಲೇ ಸರ್ವ್ ಮಾಡಿ. ಈ ಬಾಟಿ ಗಳು ಬೆಂದ ಮೇಲೆ ತಮ್ಮಷ್ಟಕ್ಕೆ ಸ್ಪ್ಲಿಟ್ ಆಗುತ್ತವೆ. ಚಿತ್ರದಲ್ಲಿರುವಷ್ಟು ಕೆಂಪು ಮಾಡಬೇಡಿ. ಬೆಂಕಿ ಜಾಸ್ತಿಯಾಗಿ ಹೀಗಾಯ್ತು. 

ದಾಲ್ :  ಎಲ್ಲ ದಾಲ್ ಗಳನ್ನು ಅಂದರೆ: ಮಸೂರ್ , ಹಸಿರುಬೇಳೆ, ಸಿಪ್ಪೆ  ಸಹಿತ  ಉದ್ದಿನ ಬೇಳೆ , ಕಡಲೆ ಬೇಳೆ , ತೊಗರಿ ಬೇಳೆ ಹೀಗೆ ಒಂದೊಂದು ಟೇಬಲ್ ಸ್ಪೂನ್( ಅಥವಾ ಈಗ  ಸೂಪರ್ ಸ್ಟೋರ್ ಗಳಲ್ಲಿ ಮಿಕ್ಸ್ ದಾಲ್ ಪ್ಯಾಕೆಟ್ ಸಿಗುತ್ತೆ ಅದನ್ನೇ ಉಪಯೋಗಿಸಬಹುದು)  - ನೀರಲ್ಲಿ ೬-೮ ಗಂಟೆ ನೆನೆಸಿ ಕುಕ್ಕರ್ ನಲ್ಲಿ ಬೇಯಿಸಿಡಿ. (ಬೇಯಿಸುವಾಗ ಸಣ್ಣಕ್ಕೆ ಕತ್ತರಿಸಿದ ನೀರುಳ್ಳಿ , ಸ್ವಲ್ಪ ಟೊಮೇಟೋ, ಬೆಳ್ಳುಳ್ಳಿ, ಅರ್ಧ ಸ್ಪೂನ್ ಅರಿಸಿನ   ಹಾಕಿ ಬೇಯಿಸಿ. ಸರೀ ಬೇಯ ಬೇಕು. ಕುಕ್ಕರ್ ನಿಂದ ತೆಗೆದು ಚೆನ್ನಾಗಿ ಮ್ಯಾಶ್ ಮಾಡಿ. 
ಎಣ್ಣೆ ಬಿಸಿ ಮಾಡಲು ಇಡಿ, ಇದಕ್ಕೆ ಜೀರಿಗೆ, ಶುಂಠಿ ಬೆಳ್ಳುಳ್ಳಿ ಪೇಸ್ಟ್ , ಇನ್ನೊಂದಿಷ್ಟು ನೀರುಳ್ಳಿ  ಹಾಕಿ ಕೆಂಪು ಆಗುವ ತನಕ (ಘಂ ಎನ್ನುವ ಸುವಾಸನೆ) ಬರುವ ತನಕ ಹುರಿಯಿರಿ. ಹಸಿ ಮೆಣಸಿಅ ಕಾಯಿ, ಕೆಂಪು ಮೆಣಸಿನ ಪುಡಿ, ಗರಂ ಮಸಾಲೆ ಪುಡಿ ಬೆರೆಸಿ ಎರಡು ನಿಮಿಷ ಕೈಯಾಡಿಸಿ. ಸ್ವಲ್ಪ ಟೋಮೇಟೊ ಬೆರೆಸಿ. ಉಪ್ಪು ಹಾಕಿ ಟೊಮೆಟೊ ಬೆಂದ ಮೇಲೆ, ಬೇಯಿಸಿದ ಬೇಳೆ ಹಾಕಿ. ಚೆನ್ನಾಗಿ ಕುದಿ  ಬಂದ ನಂತರ ಕೆಳಗಿಡಿ. 
ದಾಲ್ ಬಾಟಿ 
ಬಿಸಿ ಬಾಟಿಯನ್ನು ನಾಲ್ಕು ಪೀಸ್ ಗಳಾಗಿ ಮಾಡಿ. ಇದರ ಮೇಲೆ ತುಪ್ಪ ಸುರಿಯಿರಿ, ಆಮೇಲೆ ಬಿಸಿ ದಾಲ್ ....ದಾಲ್ ಬಾಟಿ  ರೆಡಿ. 


:-)
ಉಳಿದ ಬಾಟಿ ಯನ್ನು ಚೆನ್ನಾಗಿ ಪುಡಿ ಮಾಡಿ ಬೆಲ್ಲದ ಹುಡಿ ತುಪ್ಪ ಬೆರೆಸಿದರೆ ಅದೇ ಚುರ್ಮಾ. 
ಮಾಡಿ ಎಂಜಾಯಿಸಿ