Monday, November 30, 2015

ನೆಲ್ಲಿಕಾಯಿ ಸಾರು- ಇನ್ನೊಂದು ತರಹ


ವಾತಾವರಣ ಹೇಗಿದೆ. ಸೂರ್ಯ ನೋಡದೆ ಎಷ್ಟೊಂದು ದಿನಗಳಾದ್ವು. ದಿನವೂ ಜಿಟಿ ಜಿಟಿ ಮಳೆ. ಅದರೊಂದಿಗೆ ಸಣ್ಣಕೆ ಕಾಲಿಟ್ಟಿರುವ ಚಳಿ. ಶೀತ ಆಗದೇ ಇನ್ನೇನು?? (ನನಗಲ್ಲ ಬೇರೆಯವರಿಗೆ..i am enjoying myself...innumerable cups of tea, books and balcony). ಆದರೆ ಮನೆಯಲ್ಲಿ ಇತರರಿಗೆ ಕೆಮ್ಮು ಶೀತ ಆದರೆ ಕಿರಿಕಿರಿ. ನಾಲಿಗೆ ರುಚಿ ಬರಲು ಈ ಸಾರು ಸೂಪರ್.
( ಈ ನಮ್ಮ ವಾತಾವರಣ ಏರುಪೇರಿಗೆ ನಾವೇ ಕಾರಣ. ನಮ್ಮ ಪ್ರಕೃತಿಯನ್ನು ನಾವು ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ. she is retaliating....ಈ ಭೂಮಿ ನಮ್ಮದು. ಈಗಲಾದರೂ ಜಾಗರೂಕರಾಗಿ ಮುಂದಿನ ಪೀಳಿಗೆಗೆ ಒಳ್ಳೆಯ ಭೂಮಿಯನ್ನು ಕೊಡುವಾ ಅಲ್ವಾ??
ಇಲ್ಲಿದೆ ನಾನು ಟ್ರೈ ಮಾಡಿದ ಹೊಸ ತರಹದ ಸಾರು)


ನಾಲ್ಕು ನೆಲ್ಲಿಕಾಯಿ, ಒಂದು ಟೇಬಲ್ ಚಮಚ ತೆಂಗಿನಕಾಯಿ ತುರಿ, ಕಾಲು ಸ್ಪೂನ್ ಕೊತ್ತಂಬರಿ+ ಜೀರಿಗೆ, ನಲ್ಕೈದು ಮೆಂತೆ ಕಾಳು, ಹಿಂಗು, ಒಂದು ಹಿಡಿ ಕರಿಬೇವು, ಹಸಿಮೆಣಸಿನ ಕಾಯಿ + ಕೆಂಪು ಮೆಣಸು, ಸಣ್ಣ ಹುಣಸೆ ಹುಳಿ (ಬೇಕಿದ್ದಲ್ಲಿ)
ಎಣ್ಣೆಯಲ್ಲಿ ಒಂದೊಂದಾಗಿ ಮೇಲಿನ ಪದಾರ್ಥಗಳನ್ನು ಸ್ವಲ್ಪವೇ ಕೆಂಪು ಬಣ್ಣ ಬರುವವರೆಗೆ, ಹುರಿಯಿರಿ. ಕೊನೆಗೆ ಕಾಯಿ ತುರಿ ಮತ್ತು ನೆಲ್ಲಿಕಾಯಿ ಹೋಳು ಬೆರೆಸಿ. ತಣ್ಣಗದ ಮೇಲೆ ಹುಣಸೆ ಹುಳಿ, ಉಪ್ಪು ಬೆರೆಸಿ ನುಣ್ಣಗೆ ರುಬ್ಬಿ. ನಿಮಗೆ ಎಷ್ಟು ಬೇಕೋ ಅಷ್ಟು ತೆಳು ಮಾಡಿಕೊಳ್ಳಿ. ಚಿಕ್ಕ ತುಂಡು ಬೆಲ್ಲ ಬೆರೆಸಿ ಸರೀ ಕುದಿಸಿ. ಸಾಸಿವೆ ಜೀರೆಗೆ ತುಪ್ಪದಲ್ಲಿ ಒಗ್ಗರಣೆ ಹಾಕಿ.

ಬಿಸಿ ಅನ್ನದ ಜತೆ ಅಥವಾ ಹಾಗೇಯೇ ಸೂಪ್ ತರಹ ಕುಡಿಯಬಹುದು. ನಾಲಿಗೆಗೆ ರುಚಿ ಸರಿ ಹೋಗದಿದ್ದಲ್ಲಿ ನನ್ನ ಹೆಸರು ಬದಲಾಯಿಸಿ.
:-)

Wednesday, October 14, 2015

ಬೀಟ್ ರೂಟ್ ರೈಸ್

ರೆಸಿಪಿ ಇಲ್ಲಿದೆ

ನಾ ಮಾಡಿದ್ದು ಇಲ್ಲಿದೆ

served with boondi raita

ಹೆಂಗೆ??
:-)

Monday, September 21, 2015

ಕೆಸುವಿನ ಗೆಡ್ಡೆಯ ಬೊಡ್ಕೊ

ಹೆಸರು ಒಂತರಹ ವಿಚಿತ್ರವಾಗಿದೆಯಲ್ಲಾ?? ಅಮ್ಮ ಇಟ್ಟಿದ್ದ ಹೆಸರೋ ಅಥವಾ ಅದರ ಹೆಸರು ಹಾಗೆಯೋ ಗೊತ್ತಿಲ್ಲ. ಯಾಕೆ ಹಾಗೆ ಹೇಳಿದೆಯಂದ್ರೆ, ಕೊಂಕಣಿಯಲ್ಲಿ ಬೊಡ್ಕೊ ಅಂದ್ರೆ ತಲೆಗೆ ಬದಲಾಗಿ ಉಪಯೋಗಿಸುವ slang....ಮಂಡೆ ಸರಿಯಿಲ್ಲವಾ ಅಂತ ಕೇಳ್ತಾರಲ್ಲವಾ? ಹಾಗೆ ಬೊಡ್ಕೊ ಸಮ್ಮ ನಾ ಅಂತಾರೆ ಕೊಂಕಣಿಯಲ್ಲಿ. ಹೆಸರು ಹೇಗೇ ಇರಲಿ ತಿನ್ನಲಿಕ್ಕಂತೂ ಟೇಸ್ಟಿ. :-) ಬೇಕಾದ್ರೆ ಕೆಸುವಿನ ಗೆಡ್ಡೆಯ preparation ಅಥವಾ ಕೆಸುವಿನ ಗೆಡ್ಡೆಯ ಪದಾರ್ಥ ಅಂತ ಹೆಸರಿಡಬಹುದು. ಅರೇ ಇದೇನಿದು? ಪಾಕಕ್ಕಿಂತ ಪುರಾಣನೇ ಜಾಸ್ತಿಯಾಯ್ತು....:-)
ಮಾಡುವ ವಿಧಾನ: ಕೆಸುವಿನ ಗೆಡ್ಡೆಗಳನ್ನು ಚೆನ್ನಾಗಿ ತೊಳೆದು (ಅರ್ಧ ಗಂಟೆ ನೀರಲ್ಲಿ ನೆನೆಸಿಟ್ರೂ ನಡೀತದೆ) ಕುಕ್ಕರ್ ನಲ್ಲಿ ಬೇಯಿಸಿ. ತಣಿದ ನಂತರ ಸಿಪ್ಪೆ ಸುಲಿದಿಡಿ. ಗಾತ್ರ ಚಿಕ್ಕದಾದರೆ ಮುಳ್ಳು ಚಮಚ -fork ನಿಂದ ಚುಚ್ಚಿ. ಗೆಡ್ಡೆಯ ಗಾತ್ರ ದೊಡ್ಡದಿದ್ದರೆ ಕಟ್ ಮಾಡಿ.
ಒಗ್ಗರಣೆಗೆ ಸ್ವಲ್ಪ ಹೆಚ್ಚೇ ಎಣ್ನೆ ಬಿಸಿ ಮಾಡಲು ಇಡಿ. ಇದಕ್ಕೆ ಜೀರಿಗೆ, ಸಾಸಿವೆ, ಹಿಂಗು, ಕಾರದ ಪುಡಿ, ಅರಸಿನ ಪುಡಿ, ಹುಣಸೆ ನೀರು ಅಥವಾ ಆಮ್ ಚೂರ್ ಪೌಡರ್ (ಕ್ರಮವಾಗಿ) ಹಾಕಿ. ಗೆಡ್ಡೆಗಳನ್ನು ಬೆರೆಸಿ ಉಪ್ಪು ಹಾಕಿ 5 ನಿಮಿಷ ಮುಚ್ಚಿಡಿ. ಆ ಮೇಲೆ ಒಂದು ಟೇಬಲ್ ಸ್ಪೂನ್ ಅಕ್ಕಿ ಹಿಟ್ಟು ಉದುರಿಸಿ (ಅದು ಎಲ್ಲ ಗೆಡ್ಡೆಗಳನ್ನು ಕೋಟ್ (coat) ಆಗುವಂತೆ ನೋಡಿಕೊಳ್ಳಿ) 5 ನಿಮಿಷ ಬೇಯಿಸಿ. ಅಷ್ಟೆ. ಬಿಸಿ ಅನ್ನ, ಚಪಾತಿಗೆ ಒಳ್ಳೆಯ ಸೈಡ್ ಡಿಶ್.









Friday, September 4, 2015

ಕೆಸುವಿನೆಲೆಯ ಆಳ್ವತಿ

ಇದು ಮಲೆನಾಡಿನ especially ಕೊಂಕಣಿಯವರ specialty. ನಾನು ಮದುವೆಯಾಗಿ ತೀರ್ಥಹಳ್ಳಿಗೆ ಬಂದ ಮೇಲೆ ಈ ಅಡಿಗೆಯನ್ನು ಕಲಿತಿದ್ದು. ಅಮ್ಮನಿಗೂ ಇದರ ರುಚಿ ಹತ್ತಿಸಿದ್ದೇನೆ.

ಬೇಕಾಗಿರುವುದು : ಒಂದು ಕಟ್ಟು(8-10) ಸಣ್ಣ ಕೆಸುವಿನ ಎಲೆಗಳು, ಮೂರು ಆಮ್ಟೆ ಕಾಯಿ (hog plum), ಅರ್ಧ ಹಿಡಿ ಕಡಲೆ (ನೆನೆಸಿದ್ದು), ಮೂರು-ನಾಲ್ಕು ಹಸಿಮೆಣಸಿನಕಾಯಿ, ಕಾಲು ಇಂಚ್ ಶುಂಠಿ, ಒಂದು ದೊಡ್ಡ ಚಮಚ ಕಾಯಿ ತುರಿ, ಉಪ್ಪು, ಒಂದು ಲಿಂಬೆ ಹಣ್ಣಿನ ರಸ, ಒಂದು ಟೀ ಚಮಚ ಶುಧ್ಧ ತೆಂಗಿನ ಎಣ್ಣೆ


ವಿಧಾನ:
ಕಡಲೆ ಕಾಳು ಕುಕ್ಕರ್ ನಲ್ಲಿ ಬೆಯಿಸಿಡಿ. ಕೆಸುವಿನ ಎಲೆಗಳನ್ನು ಚೆನ್ನಾಗಿ ತೊಳೆದು, ನಾರು ತೆಗೆದು, ಸಣ್ಣಕ್ಕೆ ಕತ್ತರಿಸಿ, ಅಮಟೆ ಕಾಯಿ ಗುದ್ದಿ ಎರಡನ್ನೂ ನೀರು ಹಾಕಿ ಬೇಯಿಸಲು ಇಡಿ. ಇದಕ್ಕೆ ಸೀಳಿದ ಮೆಣಸಿನಕಾಯಿ ಮತ್ತು ಉಪ್ಪು ಹಾಕಿ ಮುಚ್ಚಿಡಿ. ಬೆಂದ ಮೇಲೆ ಗ್ಯಾಸ್ ಆಫ್ ಮಾಡಿ. ತಣಿದ ಮೇಲೆ ಅದರಿಂದ ಬೆಂದ ಹಸಿಮೆಣಸಿನಕಾಯಿ ಹೆಕ್ಕಿ ತೆಂಗಿನಕಾಯಿಯೊಂದಿಗೆ ಚೆನ್ನಾಗಿ ರುಬ್ಬಿ ಬೆಂದ ಎಲೆಯ ಜತೆ ಮಿಶ್ರಣ ಮಾಡಿ. ಇದಕ್ಕೆ ಬೇಯಿಸಿಟ್ಟ ಕಡಲೆ ಮಿಕ್ಸ್ ಮಾಡಿ ಎಷ್ಟು ಬೇಕೋ ಅಷ್ಟು ನೀರು ಹಾಕಿ, ಉಪ್ಪು ರುಚಿ ನೋಡಿ ಬೇಕಿದ್ದಲ್ಲಿ ಉಪ್ಪು ಹಾಕಿ, ಶುಂಠಿಯನ್ನು ಚಿಕ್ಕದಾಗಿ ಕತ್ತರಿಸಿ ಹಾಕಿ. ಸರಿ ಕುದಿ ಬಂದ ಮೇಲೆ ಗ್ಯಾಸ್ ಆಫ್ ಮಾಡಿ. ತೆಂಗಿನ ಎಣ್ಣೆ ಸುರಿಸಿ ಮುಚ್ಚಿಡಿ. ಬಡಿಸುವ ಮುಂಚೆ ಲಿಂಬೆ ರಸ ಬೆರೆಸಿ. ಬಿಸಿ ಬಿಸಿ ಅನ್ನದ ಜತೆ ಸೆರ್ವ್ ಮಾಡಿ.

Saturday, August 29, 2015

ಮೈಸೂರು ಬೋಂಡಾ

ಮೈಸೂರಿನವರಿಗೂ ಗೊತ್ತಿದೆಯೋ ಇಲ್ವೋ ಈ ಬೋಂಡಾ... :-) ಈ ರೆಸಿಪಿ ಸಿಕ್ಕಿದ್ದು ಯು ಟ್ಯೂಬ ನಲ್ಲಿ, ಅದೂ ಹೊರದೇಶದಲ್ಲಿರುವ ಮಹಿಳೆಯೊಬ್ಬರು ಮಾಡಿದ್ದು. ತುಂಬ ಸುಲಭ ಮಾತ್ರವಲ್ಲ, ಇದರಲ್ಲಿ  ನೀರುಳ್ಳಿ  ಇಲ್ಲ. ಒಂದು ನೀರುಳ್ಳಿ ಬೆಲೆ ಗಗನಕ್ಕೇರಿದೆ, ಮತ್ತು ಈಗ ಶ್ರಾವಣ ಮಾಸ ಕೂಡ. ಹೆಚ್ಚಿನ ಜನರು ನೀರುಳ್ಳಿ   ಬೆಳ್ಳುಳ್ಳಿ ಬಳಸಲ್ಲ. ಅವರಿಗೆ ಹೇಳಿ ಮಾಡಿಸಿದಂತಿದೆ ಈ ಖಾದ್ಯ. 

ತುಂಬಾ ಅಂದ್ರೆ ತುಂಬಾನೇ ಸಿಂಪಲ್. ಬೇಕಾಗಿರುವುದು ಒಂದು ಬಟ್ಟಲು ಮೈದಾ, ಒಂದು ಬಟ್ಟಲು ಅಕ್ಕಿ ಹಿಟ್ಟು, ಸ್ವಲ್ಪ ಅಡುಗೆ ಸೋಡಾ, ಮೊಸರು, ಉಪ್ಪು ಸಣ್ಣಕ್ಕೆ ಕತ್ತರಿಸಿದ ಹಸಿಮೆಣಸಿನಕಾಯಿ, ಶುಂಠಿ, ಮತ್ತು ಕೊತ್ತಂಬರಿ ಸೊಪ್ಪು. ಎಲ್ಲವನ್ನೂ ನೀರು ಬೆರಸಿ  ಚೆನ್ನಾಗಿ ಮಿಕ್ಸ್ ಮಾಡಿ. ದೋಸೆ ಹಿಟ್ಟಿ  ಗಿಂತ ದಪ್ಪ ವಾಗಿರಲಿ ಮಿಶ್ರಣ. ಹತ್ತು ನಿಮಿಷ ಬಿಟ್ಟು ಬಿಸಿ ಎಣ್ಣೆಯಲ್ಲಿ ಕರಿದು ತೆಗೆಯಿರಿ. ಇದರ ಹೊರ ಕವಚ ಗರಿಗರಿಯಾಗಿದ್ದು, ಒಳಗಡೆ ಬ್ರೆಡ್ ತರಹ ಸಾಫ್ಟ್ ಆಗಿರುತ್ತೆ. 


ಎಂಜಾಯ್ , ಇವತ್ತು ಅಥವಾ ನಾಳೆನೇ ಟ್ರೈ ಮಾಡಿ. :-) ಅದಕ್ಕೆ ಈಗಲೇ ಬರೆದು ಹಾಕಿದೆ. 


Thursday, August 20, 2015

ಒಗ್ಗರಣೆ ದೋಸೆ

ಸಂಜೆಯ ತಿನಿಸಿಗೆ ಇದು ಹೇಳಿ ಮಾಡಿದ್ದು. ಮಕ್ಕಳಿಗೆ ಅಂತೂ ತುಂಬಾ ಇಷ್ಟ ಆಗುತ್ತೆ. ನನ್ನ ತಮ್ಮನ 6 ವರ್ಷದ ಮಗಳು ಹುಳಿ ಬಂದ ತಿನಿಸನ್ನು ತಿನ್ನಲ್ಲ ಉದಾಹರಣೆಗೆ ಇಡ್ಲಿ, ದೋಸೆ ...ಅವಳಿಗೆ ಇಷ್ಟ ಆಗುವ ತಿನಿಸು ಪೂರಿ, ಚಪಾತಿ, ಒತ್ತು ಶ್ಯಾವಿಗೆ, ಮತ್ತು ಈ ವಗ್ಗರಣೆ ದೋಸೆ.
ಇದನ್ನು ಮಾಡುವುದು ತುಂಬಾ ಸುಲಭ
ಬೇಕಾಗಿರುವುದು: 
1 ಕಪ್ ಮೈದಾ, ಅರ್ಧ ಬಟ್ಟಲು ಮೊಸರು, ಒಂದು ದೊಡ್ಡ ಚಮಚ ತಾಜಾ ಕಾಯಿ ತುರಿ, ಎರಡು ಹಸಿ ಮೆಣಸಿನ ಕಾಯಿ (ಜಜ್ಜಿದ್ದು), ಒಂದು ದೊಡ್ಡ ಚಮಚ ಸಕ್ಕರೆ, ರುಚಿಗೆ ತಕ್ಕಷ್ಟು ಉಪ್ಪು. ಇವೆಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿ. ಹಿಟ್ಟನ್ನು ಮಾಮೂಲಿ ದೋಸೆ ಹಿಟ್ಟಿಗಿಂತ ತೆಳು, ನೀರು ದೋಸೆಗಿಂತ ಸ್ವಲ್ಪ ದಪ್ಪ- ಮಾಡಿ. ಇದಕ್ಕೆ ಸಾಸಿವೆ, ಕರಿಬೇವಿನ ಒಗ್ಗರಣೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಆಮೇಲೆ ಬಿಸಿ ಕಾವಲಿಯ ಮೇಲೆ ತೆಳ್ಳಗಿನ ದೋಸೆ ಹುಯ್ಯಿರಿ. ದೋಸೆ ಬೇಯಿಸುವಾಗ ಹೆಚ್ಚು ಎಣ್ಣೆ ಹಾಕಬೇಕೆಂದಿಲ್ಲ. ಯಾಕಂದರೆ ಕಾಯಿ ತುರಿ ಮತ್ತು ಮೊಸರು + ಒಗ್ಗರಣೆಯ ಎಣ್ಣೆ ಇದೆಯಲ್ಲ?? ಆರಾಮಾಗಿ ನಾಲ್ಕೈದು ದೋಸೆ ಮಾಡಬಹುದು.
ಗಮನಿಸ ಬೇಕಾದ ಅಂಶ: ಸಕ್ಕರೆ ಮತ್ತು ಉಪ್ಪಿನ ಪ್ರಮಾಣ ಸರಿಯಾಗಿರಬೇಕು, ಆಗಲೇ ಈ ದೋಸೆಗೆ ರುಚಿ. ಗರಿಗರಿ ಅಥವಾ ಮೆತ್ತನೆ ದೋಸೆ ನಿಮ್ಮಿಷ್ಟ...

ಹಾಗೆ ತಿನ್ನಬಹುದು ಅಥವಾ ಬೆಣ್ಣೆ/ಸಾಂಬಾರ್/ಚಟ್ನಿ ಪುಡಿಯೊಂದಿಗೆ

ಎಂಜಾಯ್
:-)

Saturday, August 15, 2015

ಕೇಸರಿ ದಾಳಿಂಬೆ ನ್ಯಾಚುರಲ್ ಐಸ್ ಕ್ರೀಮ್

ಬೇಕಾಗಿರುವುದು: ದಪ್ಪ ಹಾಲು- 2 ಕಪ್ , ಅರ್ಧ ದಾಳಿಂಬೆ, 4-5 ಕೇಸರಿ ದಳಗಳು, ಬ್ರೌನ್ ಶುಗರ್ ರುಚಿಗೆ ತಕ್ಕಷ್ಟು. 

ಮೊದಲಿಗೆ ಹಾಲನ್ನು ಕಾಯಲು ಇಡಿ. ಕೇಸರಿಯ ದಳಗಳನ್ನು ಎರಡು ಟೀ ಸ್ಪೂನ್ ಹಾಲಲ್ಲಿ ನೆನೆಸಿಡಿ,  ಅರ್ಧ ದಾಳಿಂಬೆ ಯ  ಅರ್ಧ ಭಾಗದಿಂದ ಜ್ಯೂಸ್ ತೆಗೆದಿಡಿ. ಹಾಲು ಒಂದು ಕಪ್ ಆದ ಮೇಲೆ ಗ್ಯಾಸ್ ಮೇಲಿಂದ ಕೆಳಗಿಳಿಸಿ. ಬ್ರೌನ್ ಶುಗರ್ ಬೆರೆಸಿ. ರುಚಿ ನೋಡಿ ನಿಮಗೆ ಬೇಕಾದಷ್ಟು ಸಕ್ಕರೆ ಬೆರೆಸಿ. ಕೊ0ಚ ತಣಿದ ಮೇಲೆ ಫ್ರಿಜ್ ನಲ್ಲಿ ಹಾಕಿ. ಅರ್ಧ ಸೆಟ್ ಆದ ಮೇಲೆ ಇದಕ್ಕೆ ದಾಳಿಂಬೆ ರಸ, ಉಳಿದರ್ಧ ದಾಳಿಂಬೆ ಕಾಳುಗಳು ಮತ್ತು ಕೇಸರಿ ಬೆರೆಸಿದ ಹಾಲನ್ನು ಮಿಕ್ಸ್ ಮಾಡಿ. ಸೆಟ್ ಆಗುತ್ತಿದ್ದ ಹಾಗೆ ಎರಡು ಮೂರು ಸಲ ಹೊರಗೆ ತೆಗೆದು ಐಸ್ ಕ್ರೀಮ್ ಅನ್ನು ಮುಳ್ಳು ಚಮಚದಿಂದ ಅಥವಾ ಮಿಕ್ಸಿಯಲ್ಲಿ ಬ್ಲೆಂಡ್ ಮಾಡಿ. ಪೂರ್ತಿ ಸೆಟ್ ಆಗಲು ಬಿಡಿ. ಆ ಮೇಲೆ ದಾಳಿಂಬೆ ಕಾಳುಗಳಿಂದ ಅಲಂಕರಿಸಿ ಸರ್ವ ಮಾಡಿ. 
:-) ಎಂಜಾಯ್ 
ಐಸ್ ಕ್ರೀಮ್ ಮಾಡಲು ಪ್ರೇರಣೆ ಸುಮಾ ನಾಡಿಗ್ ಹಾಗು ಹರಿ ಪ್ರಸಾದ ನಾಡಿಗ್ ಇವರು facebook ನಲ್ಲಿ ಹಾಕಿದ ಚಿತ್ರ :-)


Saturday, August 1, 2015

ಚಪಾತಿ ಪೊಕೆಟ್- chapathi pocket

ನಿಹಾರಿಕಾಳಿಗೆ ಶನಿವಾರ ಅರ್ಧ ದಿನ ಕೆಲಸ. ಮನೆಗೆ ಬಂದ ಕೂಡಲೆ ಅವಳು ಕೇಳುವ ಪ್ರಶ್ನೆ....ಆಜ್ ಖಾನೆ ಮೆ ಕ್ಯಾ ಮಜೇದಾರ್ ಹೈ’ ಅಂತ. ಮಾಲವಿಕಾಗೆ ಪುರುಸೊತ್ತಾದಾಗ ಏನಾದರೂ ಹೊಸ ಅಡುಗೆ ಮಾಡ್ತಾಳೆ. ಇವತ್ತು ಮಾಡಿದ್ದು ಚಪಾತಿ ಪೊಕೆಟ್
ಇದಕ್ಕೆ ಬೇಕಾಗಿರುವುದು ತೆಳ್ಳನೆ ಲಟ್ಟಿಸಿದ ಚಪಾತಿ, ಮಿಕ್ಸ್ ತರಕಾರಿ ಸಾssಟೇ (sauteed), hung curd sauce, ಎರಡು ಸ್ಪೂನ್ ಅನ್ನ, shredded ಕ್ಯಾಬೇಜು
*sauteed vegetables ಗೆ : ಸ್ವಲ್ಪ ಕೆಂಪು ಕ್ಯಾಪ್ಸಿಕಮ್, ಬೇಬಿ ಕಾರ್ನ್, ಬೀನ್ಸ್, ಬೋಂಡಾ ಮೆಣಸಿನಕಾಯಿ (ಲೊನ್ಗ್ ಗ್ರೀನ್ ವೈರೈಟಿ)....ಎಣ್ಣೆಯಲ್ಲಿ ಸ್ವಲ್ಪ ಕಾಳುಮೆಣಸು, ಉಪ್ಪು, ಸಕ್ಕರೆ ಹಾಕಿ ದೊಡ್ಡ ಬೆಂಕಿ ಮೇಲೆ ಸಾಫ್ಟ್ ಆಗೋ ತನಕ ಹುರಿಯೋದು  ಕೊನೆಗೆ ಪಿಟ್ಜಾ ಸೀಸನಿಂಗ್ ಹಾಕಿ
*ಸಾಸ್: ಅರ್ಧ ಗಂಟೆ ಕಟ್ಟಿಟ್ಟ ಮೊಸರು + ಕೊತ್ತಂಬರಿ ಸೊಪ್ಪು+ ಹಸಿಮೆಣಸಿನಕಾಯಿ ಪೇಸ್ಟ್, ಉಪ್ಪು, ಸಕ್ಕರೆ- ಚೆನ್ನಾಗಿ ಬ್ಲೆಂಡ್ ಮಾಡಿ
*ಕ್ಯಾಬೇಜ್ ಅನ್ನು ಶ್ರೆಡ್ ಮಾಡಿ (ತೆಳು ಉದ್ದದ್ದ ಕಟ್), ಚಿಲಿಫ್ಲೇಕ್ಸ್, ಬ್ರೌನ್ ಶುಗರ್, ವಿನೇಗರ್, ಉಪ್ಪು..ಹಾಕಿ ಮಿಕ್ಸ್ ಮಾಡಿಡಿ
ಚಪಾತಿ ಹಿಟ್ಟು ಎಣ್ಣೆ ಹಾಕಿ ಕಲಿಸಿ. ತೆಳ್ಳಗಿನ ಚಪಾತಿ ಲಟ್ಟಿಸಿ. ಎಣ್ಣೆ ಹಾಕದೆ ತವಾ ಮೇಲೆ ಬೇಯಿಸಿ. ಬೆಂದರೆ ಸಾಕು. ಬಣ್ಣ ಬರೋದು ಬೇಡ. ಆ ಚಪಾತಿ ಮಧ್ಯದಲ್ಲಿ ತರಕಾರಿ ಮಿಶ್ರಣ, ಅದರ ಮೇಲೆ ಎರಡು ಚಮಚ ಅನ್ನ, ಎರಡು ಸ್ಪೂನ್ ಸಾಸ್, ಕ್ಯಾಬೆಜ್ ಮಿಶ್ರಣ ಇಟ್ಟು, ಚಪಾತಿ ಚೌಕ್ (square) ಆಗುವಂತೆ ಫೋಲ್ಡ್ ಮಾಡಿ. (ಹೀಗೆ ಇನ್ advance ಮಾಡಿಡಬಹುದು) ಈಗ ಕಾವಲಿಗೆ ಎಣ್ಣೆ ಹಾಕಿ ಈ ಚೌಕಾಕಾರದ ಚಪಾತಿ ಅದರ ಮೇಲೆ ಇಟ್ಟು ಫ್ರೈ ಮಾಡಿ. ಕೆಂಪು ಬಣ್ಣ ಬಂದ ಮೇಲೆ ಕೆಳಗಿಳಿಸಿ, Diagonally ಕಟ್ ಮಾಡಿ. ನಿಮಗೆ ಬೇಕಾದ ರೀತಿ ಸಿಂಗರಿಸಿ, ಟೊಮ್ಯಾಟೋ ಸಾಸ್ ನೊಂದಿಗೆ ಸೆರ್ವ್ ಮಾಡಿ..







:-)

Friday, July 24, 2015

ಖಾರದ ಕಡುಬು- ಕ್ಯಾಬೆಜ್ ಸೇರಿಸಿದ್ದು

ಯಾಹೂssss ಇದು ನನ್ನ 100 ನೇ ಪೋಸ್ಟ್ ಇಲ್ಲಿ...:-) :-)
ಅಕ್ಕಿಯನ್ನು ಎರಡು ಗಂಟೆ ನೆನೆಹಾಕಿ . ಅಕ್ಕಿ ರವೆ ಇದ್ದರೆ ಅದನ್ನೇ ಬಳಸ ಬಹುದು. ಕಾಯಿ ತುರಿ+ಹುರಿದ ಕೆಂಪು ಮೆಣಸು+ಹುಣಸೆ ಹಣ್ಣು ಹಾಕಿ ನುಣ್ಣಗೆ ರುಬ್ಬಿ. ಇದಕ್ಕೆ ಅಕ್ಕಿ ಬೆರೆಸಿ ಅದು ರವೆ ರವೆ ಯಾಗುವಷ್ಟು ಮಿಕ್ಸಿಯಲ್ಲಿ ತಿರುವಿ. ಉಪ್ಪು ಬೆಲ್ಲ ಹಿಂಗು ಸೇರಿಸಿ. ಕ್ಯಾಬೆಜ್ ಸಣ್ಣಕೆ ಕತ್ತರಿಸಿ ಮಿಶ್ರಣಕ್ಕೆ ಬೆರೆಸಿ. ಒಂದು ಪಾತ್ರೆಯ ತಳಕ್ಕೆ ತೆಂಗಿನ ಎಣ್ಣೆ ಹಚ್ಚಿ. ಅದರಲ್ಲಿ ಈ ಮಿಶ್ರಣ ಹಾಕಿ. ಮಿಶ್ರಣೆ ಹೆಚ್ಚು ನೀರಾಗಿರಬಾರದು. ಹಬೆ ಪಾತ್ರೆಯಲ್ಲಿ 20 ನಿಮಿಷ ಬೇಯಿಸಿ.ಬಿಸಿ ಕಡುಬಿನ ಮೇಲೆ ತೆಂಗಿನ ಎಣ್ಣೆ ಸುರುವಿ ಸರ್ವ್ ಮಾಡಿ.  ಅನ್ನ ಸಾರು ಅಥವಾ ದಾಳಿ ತೊವ್ವೆಯೊಂದಿಗೆ ಸೂಪರ್ ಕಾಂಬಿನೇಷನ್.


Tuesday, July 21, 2015

ನೆಲ್ಲಿಕಾಯಿ ಸಾರು

ಈ ಸಲ ಬೆಂಗಳೂರಿನಲ್ಲಿ ಡೆಂಗೆ ಜ್ವರ, ಚಿಕೂನ್ ಗುನ್ಯಾ ಮತ್ತು ಹೊಸ ವೈರಸ್ ನದ್ದೆ ಸದ್ದು ಗದ್ದಲ. ಆದಷ್ಟು ಹೊರಗಡೆ ತಿನ್ನ ಬೇಡಿ. ಉಪಾಯವಿಲ್ಲದೆ ಹೊರಗಡೆ ತಿನ್ನಲೇ ಬೇಕಾದರೆ (ಆಫಿಸ್ ಟೂರ್ etc) ಬಿಸಿ ಪದಾರ್ಥಗಳನ್ನು ಸೇವಿಸಿ. ಚ್ಯಾಟ್ ಮುಂತಾದಲ್ಲಾ ಒಂದೆರಡು ತಿಂಗಳು ತಿನ್ನದಿದ್ದರೆ ಆಕಾಶ ಕಳಚಿ ಬೀಳಲ್ಲ (ನನ್ನ ಮಕ್ಕಳಿಗೆ , ರಾಯರಿಗೆ ನಾನು ಹೀಗೆ ಧಮಕಿ ಹಾಕೋದು)..:-)
ಈ ಮಳೆಯಿಂದ ಆಗುವ ಚಳಿಗೆ, ಚಳಿಗಾಳಿಗೆ ನೆಲ್ಲಿಕಾಯಿ ಸಾರು ಸೂಪರ್. ಒಂದು ಇದರಲ್ಲಿರುವ ಭರಪೂರ ವಿಟಮಿನ್ ’ಸಿ’ ಅಂಶ ನಮ್ಮ ದೇಹಕ್ಕೆ ರೋಗಗಳಿಂದ ಇಮ್ಮುನಿಟಿ (immunity) ನೀಡುತ್ತದೆ. ಅಲ್ಲದೇ ನಾಲಿಗೆಗೂ ರುಚಿಯಾಗಿರುತ್ತೆ.
ಮಾಡುವ ವಿಧಾನ
ಮೂರು ನೆಲ್ಲಿಕಾಯಿ, ಒಂದು ದೊಡ್ಡ ಚಮಚ ಕಾಯಿ ತುರಿ, ಖಾರ ಬೇಕಾದಷ್ಟು ಹಸಿಮೆಣಸಿನ ಕಾಯಿ (ಇದರ ಬದಲಿಗೆ ಕಾಳು ಮೆಣಸು ಕೂಡ ಬಳಸಬಹುದು), ಜೀರಿಗೆ, ಹಿಂಗು...

ನೆಲ್ಲಿಕಾಯಿಗಳನ್ನು ನೀರಲ್ಲಿ ಬೇಯಿಸಿ. ಬೆಂದ ಮೇಲೆ ಅದರ ಬೀಜ ಬೇರ್ಪಡಿಸಿ. ಸ್ವಲ್ಪ ಎಣ್ಣೆಯಲ್ಲಿ ಜೀರಿಗೆ , ಹಿಂಗು ಮತ್ತು ಹಸಿಮೆಣಸಿನ ಕಾಯಿ (ಕಾಳುಮೆಣಸು) ಫ್ರೈ ಮಾಡಿ. ಕಾಯಿತುರಿಯೊಟ್ಟಿಗೆ ಇವನ್ನು ಮಿಕ್ಸ್ ಮಾಡಿ, ಸ್ವಲ್ಪವೆ ಹುಣಸೆ ಹುಳಿ ಹಾಕಿ ನುಣ್ಣಗೆ ರುಬ್ಬಿ. ನೆಲ್ಲಿಕಾಯಿ ಬೇಯಿಸಿದ ನೀರಿನಲ್ಲಿ ಈ ಮಿಶ್ರಣ ಹಾಕಿ. ಬೇಕಿದ್ದರೆ ಇನ್ನೂ ನೀರು ಬೆರೆಸಿ ತೆಳ್ಳಗೆ ಮಾಡಿ. ಉಪ್ಪು ಹಾಕಿ ಒಂದೆರಡು ಕುದಿ ಬರಲು ಬಿಡಿ. ಸಾಸಿವೆ ಕರಿಬೇವು ಅಥವಾ ಬೆಳ್ಳುಳ್ಳಿಯ ಒಗ್ಗರಣೆ  ಹಾಕಿ.

ನೆಲ್ಲಿ ಕಾಯಿ ಸಾರು ತಯಾರು...
:-)

Tuesday, June 23, 2015

ಬಟರ್-ಗಾರ್ಲಿಕ್ ರೈಸ್ ವಿದ್ corn

ಬೇಕಾಗಿರುವುದು:
ತಣಿದ ಅನ್ನ - 2 ಬಟ್ಟಲು, ಹಸಿಮೆಣಸಿನ ಕಾಯಿ ನಾಲ್ಕೈದು, ಸ್ವಲ್ಪ ಸ್ವೀಟ್ ಕಾರ್ನ್, 8-10 ಬೆಳ್ಳುಳ್ಳಿ, ಎಣ್ಣೆ+ಬೆಣ್ಣೆ, ಉಪ್ಪು (ಬೇಕಿದ್ದಲ್ಲಿ ಸ್ವಲ್ಪ ಕರಿಮೆಣಸಿನ ಪುಡಿ, ದೊಣ್ಣ ಮೆಣಸಿನಕಾಯಿ etc ಬೆರೆಸಬಹುದು


ಎಣ್ಣೆ ಬಿಸಿ ಮಾಡಲಿಕ್ಕೆ ಇಡಿ. ಇದಕ್ಕೆ ಬೆಣ್ಣೆ ಬೆರೆಸಿ (ಆಗ ಬೆಣ್ಣೆ ತಳಕ್ಕೆ ತಾಗಿ ಸೀದು ಹೋಗಲ್ಲ) ಇದಕ್ಕೆ ಜಜ್ಜಿದ ಬೆಳ್ಳುಳ್ಳಿ, ಹಸಿ ಮೆಣಸಿನ ಕಾಯಿ ಬೆರೆಸಿ. ಬೆಳ್ಳುಳ್ಳಿ ಪೇಸ್ಟ್ ನಸು ಕಂದು ಬಣ್ಣಕ್ಕೆ ತಿರುಗಿದ ಮೇಲೆ ಕಾರ್ನ್ ಬೆರೆಸಿ. ಉಪ್ಪು ಬೆರ್ಸಿ ಎರಡು ನಿಮಿಷ ಕೈ ಯಾಡಿಸಿ ಅನ್ನ ಬೆರೆಸಿ.
ಅಷ್ಟೆ :-)

Saturday, May 30, 2015

ಕಲ್ಲಂಗಡಿ ಹಣ್ಣಿನ ಸಲಾಡ್

ಹಿಂದಿನ ಭಾನುವಾರ ಆಕಸ್ಮಾತ್ ಆಗಿ ಬಂಡೀಪುರಕ್ಕೆ ಹೋಗುವ ಪ್ಲ್ಯಾನ್ ಹಾಕಿದ್ವಿ. ಬಂಡೀಪುರದಿಂದ ವಾಪಸ್ ಮೈಸೂರಿಗೆ ಬರಬೇಕಾದರೆ ದಾರಿ ಬದಿಯಲ್ಲಿ ದೊಡ್ಡ ದೊಡ್ಡ ಮೂಟೆಗಳಲ್ಲಿ ಕಲ್ಲಂಗಡಿ ಹಣ್ಣುಗಳನ್ನು ಮಾರುತ್ತಿದ್ದರು. ಶ್ರೀಕಾಂತ ಒಂದು ಕಡೆ ಎಳನೀರು ಕುಡೀಲಿಕ್ಕೆ ನಿಲ್ಲಿಸಿದ್ದರು. ಆ ಎಳನೀರಿನವ, ’ಸರ್ ಚೆನ್ನಾಗಿರುತ್ತೆ ಒಂದು ಮೂಟೆ ಕೊಂಡೋಯ್ಯಿರಿ. ಆ ರೇಟ್ ಗೆ ಎಲ್ಲೂ ಸಿಗಲ್ಲ ಅಂದ. ಒಂದು ಮೂಟೆಯಲ್ಲಿ ಸಣ್ಣ ಗಾತ್ರದ 22 ಕಲ್ಲಂಗಡಿ ಹಣ್ಣುಗಳಿದ್ದವು. ನಾನು ’ಬೇಡ ಅಷ್ಟೊಂದು ಹಣ್ಣು ಯಾರು ತಿನ್ನುತ್ತರೆಂದರೆ, ಶ್ರೀಕಾಂತ ಆಫಿಸ್ ನಲ್ಲಿ ಹಂಚುತ್ತೇನೆ, ಆದರೆ ಚೆನ್ನಾಗಿರೋದು ಡೌಟು ಅಂದರು. 
ಮನೆಯಲ್ಲಿಟ್ಟುಕೊಂಡ ಕಲ್ಲಂಗಡಿ ಹಣ್ಣುಗಳು ಚೆನ್ನಾಗಿಯೇ ಇವೆ, ಆದರೆ ಸೆಪ್ಪೆ ಅಂದರೆ ಸೆಪ್ಪೆ.
ಅದಕ್ಕೆ ಮಾಲವಿಕಾ ಈ ಸಲಾಡ್ ಮಾಡುವ ಐಡಿಯಾ ಹಾಕಿಕೊಂಡಳು.
ಕಲ್ಲಂಗಡಿ ಹಣ್ಣಿನ ಚೂರುಗಳು, ಚಿಲ್ಲಿ ಪ್ಲೇಕ್ಸ್, ಉಪ್ಪು, ಹುರಿದು ಪುಡಿ ಮಾಡಿಟ್ಟುಕೊಂಡ ಬದಾಮಿ ಪುಡಿ/ಶೇಂಗಾ ಪುಡಿ, ಲಿಂಬೆ ಹಣ್ಣಿನ ರಸ, ಮತ್ತು ಬೊಂಬಾಯಿ ಬಸಳೆಯ ಚೂರುಗಳು. ಯಮ್ಮಿ. ತುಂಬಾನೆ ರುಚಿಯಾಗಿತ್ತು. ಈಗ ಎರಡು ಮೂರು ಸಲ ಮಾಡಿಕೊಂಡು ತಿಂದ್ವಿ...

Wednesday, May 27, 2015

ಬಟಾಟೆ ಚಕ್ಕುಲಿ

ಮೈದಾ ವನ್ನು ಬಟ್ಟೆಯಲ್ಲಿ ಕಟ್ಟಿ ಹಬೆ ಪಾತ್ರೆಯಲ್ಲಿ ಬೇಯಿಸಿದ್ದು ಮತ್ತು ಚಿಟಿಕೆ ಹಿಂಗು ಪುಡಿ ಬೆರೆಸಿದ್ದು ಬಿಟ್ರೆ, ಈ ರೆಸಿಪಿ ಲಕ್ಷ್ಮೀ ಕ್ಯಾಂಟೀನ್ ಬ್ಲಾಗ್ ನಿಂದ...copied to a T..... ಇಲ್ಲಿದೆ ಲಿಂಕ್
ಬಟಾಟೆ/ಆಲೂಗಡೆ ಚಕ್ಕುಲಿ

ಮಾಲವಿಕಾಳಿಗೆ ಬಟಾಟೆ ಚಕ್ಕಲಿ ಮಾಡುವಾ ಅಂದ್ರೆ..how can you ask ? anything that has potato in it u should just go and do it...ಅಂತೆ..ಆಲೂಗಡ್ಡೆ ಅಂದ್ರೆ ಅದೇನು ಪ್ರೀತಿಯೋ...ನನ್ನ ಇಬ್ಬರೂ ಮಕ್ಕಳಿಗೂ




Tuesday, May 26, 2015

ಮಾವಿನಹಣ್ಣಿನ ಶಿರಾ

ಬಾಂಬೆ ರವಾ - 1 ಬಟ್ಟಲು
ತುಪ್ಪ - 1 ಬಟ್ಟಲು
ಮಾವಿನ ಹಣ್ಣಿನ ಪಲ್ಪ್ - 1 ಬಟ್ಟಲು
ಸಕ್ಕರೆ - 1/2 ಬಟ್ಟಲು ಅಥವಾ ಕಡಿಮೆ- ಮಾವಿನ ಹಣ್ಣಿನ ಸಿಹಿ ನೋಡಿ ಸಕ್ಕರೆ ಬೆರೆಸಿ
ಗೋಡಂಬಿ
ಕಾದ ನೀರು - 2 1/2 ಬಟ್ಟಲು (ಎರಡುವರೆ)


ಮೊದಲಿಗೆ ತುಪ್ಪದಲ್ಲಿ ಗೋಡಂಬಿ ಮತ್ತು ರವೆ ಘಂ ಅನ್ನುವವರೆಗೆ ಹುರಿಯಿರಿ. ನೀರು ಬಿಸಿ ಮಾಡಲು ಇಡಿ. ಮಾವಿನ ಹಣ್ಣಿನ ಪಲ್ಪ್ ಹುರಿದ ರವೆಗೆ ಬೆರೆಸಿ ಎರಡು ನಿಮಿಷ ಕೈಯಾಡಿಸಿ. ನೀರು ಹಾಕಿ ರವೆಯನ್ನು ಚೆನ್ನಾಗಿ ಬೇಯಿಸಿ. ಬೆಂದ ಮೇಲೆ ಸಕ್ಕರೆ ಬೆರೆಸಿ. ಕೈಯಾಡಿಸ್ತಾ ಇರಿ. ಗಟ್ಟಿ ಬೇಕಾದರೆ ಸ್ವಲ್ಪ ಜಾಸ್ತಿ ಹೊತ್ತು ಒಲೆ ಮೇಲಿಡಿ. ಅಥ್ವಾ ತೆಳ್ಳಗಿನ ಶಿರಾ ಮಾಡಬಹುದು.
ಹಾಗೆಯೇ ತಿನ್ನ ಬಹುದು. ಪೂರಿ ಜತೆ ಅಥವಾ ಉದ್ದಿನ ದೋಸೆಯೊಂದಿಗೆ ಸರ್ವ್ ಮಾಡಬಹುದು.
ಈ ರೆಸಿಪಿಗೆ inspiration ಸ್ನೇಹಿತೆ ರಾಧಿಕಾ ಗಂಗಣ್ಣ.

Monday, May 25, 2015

ಪಾಕಶಾಲೆ

ಸುವರ್ಣ ವಾಹಿನಿಯ ಪಾಕಶಾಲೆ ಕಾರ್ಯಕ್ರಮದಲ್ಲಿ ನನ್ನ ಮಗಳು ಭಾಗವಹಿಸಿದ್ದಳು. ನಮ್ಮ ಮನೆಯಲ್ಲಿ ಟಿ ವಿ ಇಲ್ಲವೆಂದು ಹೇಳಿದಾಗ , organiser ಶ್ರೀದೇವಿ ಕುಡ್ಲ ನನಗೆ ಈ ಲಿಂಕ್ ಕಳುಹಿಸಿಕೊಟ್ಟಿದ್ದಾರೆ.
ಶೆಫ್ ಕೆಲವು ಉಪಯುಕ್ತ ಟಿಪ್ಸ್ ಗಳನ್ನು ಕೊಟ್ಟಿದ್ದಾರೆ.
ನೀವು ಈ ಕಾರ್ಯಕ್ರಮವನ್ನು ಇಲ್ಲಿ ವೀಕ್ಷಿಸಬಹುದು. ಯು ಎಸ್ ನಲ್ಲಿರುವ ನನ್ನ ತಂಗಿಗೆ ಈ ಲಿಂಕ್ ಕಳಿಸ್ತಿದ್ದೆ. ಹಾಗೆಯೇ ನಿಮ್ಮ ಜತೆ ಕೂಡ ಶೇರ್ ಮಾಡುವಾ ಅಂತ..............
ದಿನ-1

ದಿನ -2

ದಿನ- 3

Friday, May 15, 2015

ಮಾವು - ಅನಾನಸಿನ ಸಾಸಿವೆ (Mango -pineapple)

ಮಾಡುವ ಬಗೆ:
ಮಾವಿನ ಹಣ್ಣು ಅನಾನಸಿನ ಹೋಳು ಮಾಡಿಟ್ಟು ಕೊಂಡು ಅದಕ್ಕೆ ಉಪ್ಪು ಬೆಲ್ಲ ಹಸಿಮೆಣಸಿನಕಾಯಿ ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ.

 ಒಂದು ಟೇಬಲ್ ಚಮಚ ಕಾಯಿ ತುರಿ, ನಾಲ್ಕೈದು (ಅಥವಾ ನಿಮಗೆ ಎಷ್ಟು ಖಾರ ಬೇಕೋ ಅಷ್ಟು) ಹುರಿದ ಕೆಂಪು ಮೆಣಸು, ಸಣ್ಣ ತುಂಡು ಹುಣಸೆ ಹುಳಿ, ಅರ್ಧ ಚಮಚ ಸಾಸಿವೆ - ಇವನ್ನು ನುಣ್ಣಗೆ ರುಬ್ಬಿ. ಹೋಳುಗಳಿಗೆ ಬೆರೆಸಿ. ರುಚಿ ನೋಡಿ ಬೇಕಿದ್ದಲ್ಲಿ ಇನ್ನಷ್ಟು ಉಪ್ಪು, ಬೆಲ್ಲ ಸೇರಿಸಿ. ಹುಳಿ, ಖಾರ, ಸಿಹಿ, ಉಪ್ಪು ಇವೆಲ್ಲ ಸಮ ಪ್ರಮಾಣದಲ್ಲಿದ್ದರೇನೆ ಈ ಸಾಸಿವೆಗೆ ರುಚಿ.  ಕೊನೆಯಲ್ಲಿ ಸಾಸಿವೆ ಕರಿಬೇವಿನ ಒಗ್ಗರಣೆ ಕೊಡಿ.


ದಕ್ಷಿಣ ಕನ್ನಡದ ಕಡೆ ಈ ಸಾಸಿವೆಗೆ ದ್ರಾಕ್ಶಿ, ಗೇರು ಹಣ್ಣು ಕೂಡ ಬೆರೆಸುತ್ತಾರೆ. ಅದರ ರುಚಿನೇ ಬೇರೆ. :-)

Monday, May 11, 2015

ಆಲೂಗಡ್ಡೆ-ಮಾವಿನಕಾಯಿ ಗೊಜ್ಜು

ಇದು ನನ್ನ ಮಗಳ ಇಷ್ಟದ ಪದಾರ್ಥ. ನನ್ನ ಇಬ್ಬರೂ ಮಕ್ಕಳು ಜಂಕ್ ಫುಡ್ ಎಂಜಾಯ್ ಮಾಡುವಷ್ಟೆ ನಮ್ಮ ಸಾಂಪ್ರದಾಯಿಕ ಅಡುಗೆಗಳನ್ನು ಇಷ್ಟ ಪಡುತ್ತಾರೆ ಆದ್ದರಿಂದ ಮಾಡಲೂ ಹುಮ್ಮಸ್ಸು ಬರುತ್ತದೆ. ಈಗಂತೂ ಮಾವಿನಕಾಯಿಯ ಸೀಸನ್. ನನ್ನ ಅಜೋಬಾ ಯಾವಾಗ್ಲೂ ಹೇಳೋವ್ರು, ಆಯಾ ಸೀಸನ್ ನ ಫುಡ್ ಕನ್ಸ್ಯೂಮ್ ಮಾಡಿದ್ರೆ ಯಾವ ಕಾಯಿಲೆ-ಕಸಾಲೆನೂ ಹತ್ತಿರ ಸುಳಿಯಲ್ಲ ಅಂತ.
ಮಾವಿನ ಕಾಯಿ ಹಾಗೂ ಆಲೂಗಡ್ಡೆಯನ್ನು ಚೆನ್ನಾಗಿ ಬೇಯಿಸಿ ಮ್ಯಾಶ್ ಮಾಡಿ. ಹಸಿ ಮೆಣಸಿನಕಾಯಿ ಜಜ್ಜಿ ಹಾಕಿ
ಉಪ್ಪು, ಹಿಂಗು ನೀರು ಬೆರೆಸಿ. ಸಾಸಿವೆ ಕರಿಬೇವಿನ ಒಗ್ಗರಣೆ ಕೊಡಿ. ಸುಲಭ ಮಾತ್ರವಲ್ಲ ರುಚಿಯಾಗಿರುತ್ತೆ. ಬಿಸಿ ಅನ್ನ ಸೇರಿಸಿ ತಿಂದರೆ ಒಂದು ತುತ್ತು ಜಾಸ್ತಿನೇ ಉಣ್ಣ ಬಹುದು.
:-)

Thursday, May 7, 2015

ಸಿಂಪಲ್, ವರ್ಣಮಯ, ರುಚಿಕರ ಪೌಷ್ಠಿಕ ಸಲಾಡ್

ಎಷ್ಟು ದೊಡ್ಡ ಕ್ಯಾಪ್ಶನ್:
ತಾಜಾ ಮೂಲಂಗಿ ಎಲೆ, ಮೂಲಂಗಿ, ಕೆಂಪು ದೊಣ್ ಮೆಣಸು, ಹಳದಿ ದೊಣ್ ಮೆಣಸು, ಉಪ್ಪು, ಸಕ್ಕರೆ, ಕಾಳುಮೆಣಸಿನ ಪುಡಿ ಲಿಂಬೆ ರಸ
ಮೂಲಂಗಿ ಎಲೆಗಳನ್ನು ತೊಳೆದು ಸಣ್ಣಕ್ಕೆ ಕತ್ತರಿಸಿ, ಉಳಿದ ತರಕಾರಿ ಕತ್ತರಿಸಿ, ಉಪ್ಪು, ಚಿಟಿಕೆ ಸಕ್ಕರೆ, ಕಾಳುಮೆಣಸಿನ ಪುಡಿ ಲಿಂಬೆ ರಸ ಬೆರೆಸಿ . ಸಲಾಡ್ ತಯಾರು! :-)



Just toss together  radish leaves, washed thoroughly and cut into small pieces along with some radish, yellow capsicum, red capsicum mixed with salt, pinch of sugar, black pepper powder and a dash of lime juice and serve this colourful and healthy salad

Wednesday, April 8, 2015

Rice balls in gravy

ಕನ್ನಡದಲ್ಲಿ ನೀವೇ ಏನಾದ್ರು ಹೆಸರಿಡಿ
ಬೇಕಾಗುವ ಪದಾರ್ಥ: ಅಕ್ಕಿ ಹಿಟ್ಟು, ಚಿಟಿಕೆ ಜೀರಿಗೆ, ಉಪ್ಪು, ಸ್ವಲ್ಪ ಎಣ್ಣೆ, ಕಲಿಸಲು ಸ್ವಲ್ಪ ನೀರು

ಅಕ್ಕಿ ಹಿಟ್ಟಿಗೆ ಉಪ್ಪು ಜೀರಿಗೆ ಎಣ್ಣೆ ಹಾಕಿ ಕಲಿಸಿ. ಸ್ವಲ್ಪ ಬಿಸಿ ನೀರು ಹಾಕಿ ಮುಚ್ಚಿಡಿ. 5 ನಿಮಿಷ ಬಿಟ್ಟು ತಣ್ಣಗಿನ ನೀರಿನೊಂದಿಗೆ ಚಪಾತಿ ಹಿಟ್ಟಿನಂತೆ ಕಲಿಸಿ. ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿ ಇಡಿ. ನೀರು ಬಿಸಿ ಮಾಡಲು ಇಡಿ. ನೀರು ಮರಳಲು ಶುರು ಆದಾಗ ಅದರಲ್ಲಿ ಅಕ್ಕಿ ಹಿಟ್ಟಿನ ಉಂಡೆಗಳನ್ನು ಹಾಕಿ. ಅಕ್ಕಿ ಉಂಡೆಗಳು ತೆಲಲು ಶುರು ಆದಾಗ ನೀರಿನಿಂದ ಜಾಲರಿ ಪಾತ್ರೆಗೆ ಬಸಿಯಲು ಇಡಿ. 





ಗ್ರೇವಿಗೆ ನಾನು ಮೆಂತೆಸೊಪ್ಪಿನ ದಾಲ್ ಮಾಡಿದೆ.
ತೊಗರಿ ಬೆಳೆ, ಮೆಮ್ತೆ ಸೊಪ್ಪು, ನೀರುಳ್ಳಿ, ಸ್ವಲ್ಪ ಬೆಳ್ಳುಳ್ಳಿ, ಹಸಿ ಮೆಣಸಿನ ಕಾಯಿ, ಮೆಣಸಿನ ಪುಡಿ,ಅರಿಶಿನ ಪುಡಿ, ಟೊಮ್ಯಾಟೊ ಹಣ್ಣು, ಹಸಿ ಮೆಣಸಿನ ಕಾಯಿ. ಜೀರಿಗೆ, ಕರಿಬೇವು ಸೊಪ್ಪು ಉಪ್ಪು
ತೊಗರಿ ಬೇಳೆ ಬೀಯಿಸಿಡಿ. ಮೆಂತೆ ಸೊಪ್ಪು ಚೆನ್ನಾಗಿ ತೊಳೆದು ಕಟ್ ಮಾಡಿಡಿ. 
ಎಣ್ಣೆ ಕಾಯಿಸಿ. ಇದಕ್ಕೆ ಜೀರಿಗೆ ಕರಿಬೇವಿನ ಒಗ್ಗರಣೆಗೆ ಇಡಿ. ಹಸಿ ಮೆಣಸಿನಕಾಯಿ ಬೆರೆಸಿ. ನಂತರ ನೀರುಳ್ಳಿ ಹಾಕಿ ಕೆಂಪಗೆ ಹುರಿಯಿರಿ. ಇದಕ್ಕೆ ಜಜ್ಜಿದ ಬೆಳ್ಳುಳ್ಳಿ ಬೆರೆಸಿ, ಕೆಂಪು ಮೆಣಸಿನ ಪುಡಿ, ಅರಿಸಿನ ಪುಡಿ ಬೆರೆಸಿ, ಎರಡು ನಿಮಿಷ ಕೈಯಾಡಿಸಿ. ಟೊಮ್ಯಾಟೊ ಹಾಕಿ 5 ನಿಮಿಷ ಬೇಯಿಸಿ. ಈಗ ಮೆಂತೆ ಸೊಪ್ಪು, ಚಿಕೆ ಸಕ್ಕರೆ, ಉಪ್ಪು ಬೆರೆಸಿ ಎರಡು ನಿಮಿಷ ಕೈಯಾಡಿಸಿ. ಕೊನೆಯಲ್ಲಿ ಬೇಯಿಸಿದ ತೊಗರಿ ಬೇಳೆ ಬರೆಸಿ. ಬೇಕಾದಷ್ಟು ನೀರು ಬೆರೆಸಿ. ಅಕ್ಕಿ ಉಂಡೆಗಳನ್ನು ಹಾಕಿ 5-10 ನಿಮಿಷ ಕುದಿಸಿ. 

Sunday, April 5, 2015

ಸುವರ್ಣ ಗೆಡ್ಡೆ ಕೂಟು

ಒಂದು ಚಿಕ್ಕ ತುಂಡು ಸುವರ್ಣಗೆಡ್ಡೆ, ಕರಿಯಲಿಕ್ಕೆ ಎಣ್ಣೆ, ಕಾಯಿ ತುರಿ, ಹುರಿದ ಕೆಂಪು ಮೆಣಸು, ಹುಣಸೆ ಹುಳಿ, ಸಾಸಿವೆ, ಹಿಂಗು, ಮೆಂತೆ, ಕರಿಬೇವು ಉಪ್ಪು

ಸುವರ್ಣಗಡ್ಡೆಯನ್ನು ಚಿಕ್ಕದಾಗಿ ಕತ್ತರಿಸಿ. 10 ನಿಮಿಷ ಉಪ್ಪು ಹಚ್ಚಿಡಿ. ನೀರು ಬಿಡುತ್ತೆ. ನೀರೆಲ್ಲ ಹಿಂಡಿ ಒಂದು ತೆಳು ಬಟ್ಟೆ ಮೇಲೆ ಪಸರಿಸಿ. ನೀರು ಆವಿಯಾದ ಮೇಲೆ ಎಣ್ಣೆಯಲ್ಲಿ ಕರಿಯಿರಿ. ಒಳ್ಳೆ ಬಿಸ್ಕಿಟ್ ತರ ಕುರ್ ಮುರಿ ಆಗುತ್ತೆ. ಇದನ್ನು ಗಾಳಿಯಾಡದ ಡಬ್ಬಿಯಲ್ಲಿ ಹಾಕಿ ಸ್ಟೋರ್ ಮಾಡಬಹುದು. 

ಕೂಟು ಮಾಡಲು: ಸ್ವಲ್ಪ ಎಣ್ಣೆಯಲ್ಲಿ ಸಾಸಿವೆ, ಹಿಂಗು ಮೆಂತೆ ಹುರಿದಿಡಿ. ಎರಡು ದೊಡ್ಡ ಚಮಚ ತೆಂಗಿನ ತುರಿ, ಸಣ್ಣದೊಂದು ಹುಣಸೆ ಹುಳಿ, ಕೆಂಪು ಮೆಣಸು, ಹುರಿದ ಸಾಮಗ್ರಿ ಎಲ್ಲವನ್ನೂ ನುಣ್ಣಗೆ ರುಬ್ಬಿ. ಉಪ್ಪು ಹಾಕಿ. ಸ್ವಲ್ಪ ನೀರು ಬೆರೆಸಿ ಕುದಿಯಲು ಬಿಡಿ. ಸಾಸಿವೆ ಕರಿಬೇವಿನ ಒಗ್ಗರಣೆ ಹಾಕಿ.  ಬಡಿಸುವ ಸ್ವಲ್ಪ ಮುಂಚೆ ಹುರಿದಿಟ್ಟ ಸುವರ್ಣಗೆಡ್ಡೆ ಚೂರುಗಳನ್ನು ಬೆರೆಸಿ.
ಚಟ್ನಿ ಹದಕ್ಕೆ ಮಾಡಿ. ಈ ಚಿತ್ರದಲ್ಲಿನ ಕೂಟು ಸ್ವಲ್ಪ ಡ್ರೈ ಮಾಡಿದ್ದೇನೆ. ಲಂಚ್ ಬಾಕ್ಸ್ ನಲ್ಲಿ ಹಾಕಲು ಮಾಡಿದ್ದು.

Saturday, March 28, 2015

ವೀಳ್ಯದೆಲೆ ಚಿತ್ರಾನ್ನ

ಬೇಕಾಗುವ ಸಾಮಗ್ರಿ:
ಎರಡು ತಾಜಾ ವೀಳ್ಯದೆಲೆ, 8-10 ಪುಡಿ ಮಾಡಿದ ಕರಿ ಮೆಣಸು, ಹಸಿ ಮೆಣಸಿನಕಾಯಿ ಉದ್ದಕ್ಕೆ ಸೀಳಿದ್ದು, ಉದ್ದಿನ ಬೇಳೆ, ಕಡ್ಲೆ ಬೇಳೆ, ಸಾಸಿವೆ, ಕರಿಬೇವು, ತುಪ್ಪ. ನಿಂಬೆ ಹಣ್ಣಿನ ರಸ
ಅನ್ನ ಮಾಡಿಟ್ಟು ಕೊಂಡು ತಣ್ಣಗಾಗಲು ಬಿಡಿ
ವೀಳ್ಯದೆಲೆಗಳನ್ನು ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ


ಒಗ್ಗರಣೆಗೆ ತುಪ್ಪ ಇಡಿ. ಇದಕ್ಕೆ ಉದ್ದಿನ ಬೇಳೆ, ಕಡ್ಲೆ ಬೇಳೆ, ಸಾಸಿವೆ ಕರಿಬೇವು ಕ್ರಮವಾಗಿ ಸೇರಿಸಿ. ಹಸಿ ಮೆಣಸಿನಕಾಯಿ ಬೆರೆಸಿ ರುಬ್ಬಿದ ಎಲೆಗಳನ್ನು ಸೇರಿಸಿ ಹಸಿ ವಾಸನೆ ಹೋಗುವ ತನಕ ಹುರಿಯಿರಿ. ನಂತರ ಇದಕ್ಕೆ ಕರಿಮೆಣಸಿನ ಪುಡಿ ಸೇರಿಸಿ, ಒಂದೆರಡು ನಿಮಿಷ ಕೈಯಾಡಿಸಿ. ಅನ್ನ ಉಪ್ಪು ಚಿಟಿಕೆ ಸಕ್ಕರೆ ಬೆರೆಸಿ. ಬೇಕಾದರೆ ಮೇಲಿಂದ ನಿಂಬೆ ಹಣ್ಣಿನ ರಸ ಬೆರೆಸಿ. ಕಾಯಿ ತುರಿ optional.
ಫೇಸ್ ಬುಕ್ ನ ಪಾಕ ಶಾಲೆ ಗ್ರೂಪ್ ನ ಪೂರ್ಣಿಮಾ ಗಿರೀಶ್ ಮತ್ತು ಶ್ರೀನಿಧಿ ಹರಿಪ್ರಸನ್ನ ಅವರಿಂದ ಕಲಿತಿದ್ದು....

Thursday, March 26, 2015

ಬಾಳೆ ಹಣ್ಣಿನ ಚಪಾತಿ

ನನ್ನ ನಿಂಪಿ ಆಫಿಸ್ ನಲ್ಲಿ ಅರ್ಧಕ್ಕಿಂತ ಹೆಚ್ಚಿನವರು ಬ್ಯಾಚಲರ್ಸ್ ಗಳು. ನಾನು ಅವಳಿಗೆ ಲಂಚ್ ಬಾಕ್ಸ್ ನಲ್ಲಿ ಕಳಿಸುವ ತಿಂಡಿಗಳ ಬಗ್ಗೆ ಕೌತುಕ. ನಿಮ್ಮ ಅಮ್ಮ ಮಾಡುವ ಚಪಾತಿ ಹೇಗೆ ಸಾಫ್ಟ್ ಆಗಿರುತ್ತೆ? ಎಲ್ಲಿಂದ ಹಿಟ್ಟು ತರಿಸ್ತಿರಿ, ಯಾವ ಹಿಟ್ಟು ತರಿಸ್ತೀರಿ? packed ಆ loose ಆ ವಗೈರೆ. ಈ ಹುಡುಗರು ಒಂದು ರೂಮ್ ಮಾಡಿಕೊಂಡು ಇರೋದಂತೆ. ಊರಿನಿಂದ ಒಬ್ಬ ಅಡಿಗೆಯವನನ್ನು ಇಟ್ಟುಕೊಂಡಿದ್ದಾರೆ. 10 -15 ಜನರಿಗೆ ಅವನು ಅಡಿಗೆ ಮಾಡಿ ಹಾಕುತ್ತಾನಾದ್ದರಿಂದ, ಹಲವಾರು ಜನರ ಬಾಕ್ಸ್ ನಲ್ಲಿ ಒಂದೇ ತಿಂಡಿ. ಅದೇನು ಶೇರ್ ಮಾಡಕ್ಕೆ ಆಗಲ್ಲ. ಈಗ ನಿಹಾ ಅವರ ಜತೆ ಕೆಲಸಕ್ಕೆ ಸೇರಿದ ಮೇಲೆ, ಕೆಲವೊಮ್ಮೆ ಅವಳ ಲಂಚ್ ಬಾಕ್ಸ್ ಅವರೇ ಖಾಲಿ ಮಾಡಿ, ಬಾಕ್ಸ್ ತೊಳೆದಿಟ್ಟು, ಅವಳಿಗೋಸ್ಕರ ಹೋಟಲ್ ನಿಂದ ಫ್ರೈಡ್ ರೈಸ್ ಮುಂತಾದ್ದು ತಂದು ಕೊಡುತ್ತಾರಂತೆ. ನಾನು ಅವಳಿಗೆ ಎರಡು ಬಾಕ್ಸ್ ತೆಗೊಂಡು ಹೋಗೆ ಅನ್ನುತ್ತಿರುತ್ತೇನೆ. ಒಂದು ನಿನಗೆ ಒಂದು ಅವರಿಗೆ ಅಂತ. ಅಯ್ಯೋ ಯಾರಮ್ಮ ಹೊತ್ತು ಕೊಂಡು ಹೋಗ್ತಾರೆ? ನಾನಂತು ಉಪವಾಸ ಇರಲ್ಲ. ಏನಿಲ್ಲದ್ದಿದ್ದರೆ ಅವರ ಆಫಿಸ್ ನಲ್ಲಿ ಮ್ಯಾಗಿ ಪ್ಯಾಕೆಟ್, ಬಿಸ್ಕಟ್ ವಗೈರೆ ಇರುತ್ತದಂತೆ. ಅದರ ಬಳಿ ಒಂದು ಡಬ್ಬಿ ಇರುತ್ತದಂತೆ.ಏನಾದರೂ ಉಪಯೋಗಿಸುವುದಿದ್ದರೆ  ಆ ಡಬ್ಬಿಯಲ್ಲಿ ಆ ಪ್ಯಾಕೆಟ್ ನಲ್ಲಿ ನಮೂದಿಸಿರುವ ಬೆಲೆಯ ಹಣವನ್ನು ಡಬ್ಬಿಗೆ ಹಾಕಿ ಬಿಡುವುದಂತೆ. ಪಿಯೋನ್ ಖಾಲಿಯಾದಂತೆ ಅಡಿಗೆ ಸಾಮಾಗ್ರಿ ಅಲ್ಲಿ ತುಂಬಿಡುತ್ತಾಳಂತೆ. ದಿನದಲ್ಲಿ ಮೂರು ನಾಲ್ಕು ಬಾರಿ ಟೀ ಮತ್ತು ಬಿಸ್ಕಟ್ ಇವರು ಕೂತ ಕಡೆ ಸರಬರಾಜಾಗುತ್ತಂತೆ. ಅದಕ್ಕೆ ಅವಳು ಆಫಿಸ್ ನಿಂದ ಮನೆಗೆ ಎರಡು ಕಿ ಮಿ ನಡೆದುಕೊಂಡು ಬರುತ್ತಾಳೆ. ಮತ್ತೆ ಎರಡೆರಡು ಡಬ್ಬಿ ಎತ್ತಿಕೊಂಡು ಹೋಗು ಅಂತ ಹೇಗೆ ಹೇಳಲಿ?? :-) ಇರೋ ಒಂದು ಬಾಕ್ಸ್ ನಲ್ಲೇ ಆದಷ್ಟು ತಿಂಡಿ ತುರುಕಿಸಿ ಕಳಿಸ್ತೀನಿ.
ಬಾಳೆ ಹಣ್ಣಿನ ಚಪಾತಿ ಮಾಡುವ ಬಗ್ಗೆ
4-5 ತುಂಬಾ ಹಣ್ಣಾದ (ಕಳಿತ) ಬಾಳೆಹಣ್ಣು, 10-15 ಕರಿ ಮೆಣಸಿನ ಪುಡಿ,2 ಸ್ಪೂನ್ ಜೀರಿಗೆ, ರುಚಿಗೆ ತಕ್ಕ ಉಪ್ಪು ಉಪ್ಪು...ಇವಿಷ್ಟನ್ನೂ ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿ. ಇದಕ್ಕೆ ನಾಲ್ಕೈದು ಬಟ್ಟಲು ಗೋದಿ ಹಿಟ್ಟು ಬೆರೆಸಿ. ಬೇಕಾದರೆ ನೀರು ಬೆರೆಸಿ ಮೆತ್ತಗಿನ ಹಿಟ್ಟು ತಯಾರಿಸಿ. ಚಪಾತಿ ಲಟ್ಟಿಸಿ. ಬಿಸಿ ಕಾವಲಿ ಮೇಲೆ ಹಾಕಿ ತುಪ್ಪ ಹಚ್ಚಿ ಎರಡೂ ಬದಿ ಕಾಯಿಸಿ. ಅಷ್ಟೆ

ಈ ಚಪಾತಿಗೆ ಸೈಡ್ಸ್ ಎಲ್ಲ ಬೇಡ. ಆಫಿಸ್ ಕೆಲ್ಸ ಮಾಡ್ತಾ ಅಥವಾ ನನ್ನ ತರಹ ಯು ಟ್ಯೂಬ್ ನಲ್ಲಿ ಫಿಲ್ಮ್ ನೋಡ್ತಾ ಗುಳುಂ ಮಾಡಬಹುದು.
:-)

Saturday, March 21, 2015

ಘರಯಿ / ಹಲಸಿನ ಹಣ್ಣಿನ ಪಾಯಸ

ಯುಗಾದಿಗೆ ನಾವು ಜಿ ಎಸ ಬಿ ಸಂಪ್ರದಾಯದ ಪ್ರಕಾರ ಕಡ್ಲೆ ಬೇಳೆ ಪಾಯಸ ಮಾಡ ಬೇಕು. ಆದರೆ ಈ ಸಲ ಸ್ವಲ್ಪ ಬದಲಾವಣೆ ಇರಲಿ ಅಂತ   ಹಲಸಿನ ಹಣ್ಣಿನ ಪಾಯಸ ಮಾಡಿದೆ. ಚೆನ್ನಾಗಿ ಬಂತು. ಇದರ ಬಗ್ಗೆ ಕೇಳಿದ್ದೆ , ಆದರೆ ಎಲ್ಲೂ ತಿಂದಿರಲಿಲ್ಲ . ಹಾಗೆ ಹಲಸಿನ ಹಣ್ಣು ಕೂಡ ತುಂಬಾ ಇತ್ತು. 
ಬೇಕಾಗುವುದು : ಕೆಲವು ಹಲಸಿನ ಹಣ್ಣಿನ ತೊಳೆಗಳು, ಗೇರುಬೀಜ , ಬೆಲ್ಲ , ಕಾಯಿಹಾಲು, ತುಪ್ಪ , ಬಾಂಬೆ ರವಾ,  ಏಲಕ್ಕಿ 

ಹಲಸಿನ ಹಣ್ಣಿನ ತೊಳೆಗಳನ್ನು ಚಿಕ್ಕದಾಗಿ ಹೆಚ್ಚಿ. ಸ್ವಲ್ಪ ನೀರು, ಗೇರು ಬೀಜದ ಚೂರು ಮತ್ತು ಬೆಲ್ಲದೊಂದಿಗೆ ಹಲಸಿನ ಹಣ್ಣು ಮೆತ್ತಗಾಗುವವರೆಗೆ ಬೇಯಿಸಿ . ಬಾಣಲೆಯಲ್ಲಿ  ತುಪ್ಪ ಹಾಕಿ ಅದರಲ್ಲಿ ಎರಡು ಟಿ ಸ್ಪೂನ್  ರವೆಯನ್ನು ಹುರಿದುಕೊಳ್ಳಿ . ಬಿಸಿ ನೀರು ಹಾಕಿ ಬೇಯಿಸಿ ಕೊಳ್ಳಿ . ಬೆಂದ ಮೇಲೆ ಬೆಂದ ಹಲಸಿನ ಜೊತೆ ಸೇರಿಸಿ. ಎಷ್ಟು ಬೇಕು ಅಷ್ಟು ತೆಳು ಮಾಡಿ ಕೊಳ್ಳಿ . ಕೊನೆಯಲ್ಲಿ ತೆಂಗಿನ ದಪ್ಪ ಹಾಲು ಸೇರಿಸಿ. ಏಲಕ್ಕಿ ಸೇರಿಸಿ. ಹಲಸಿನ ಹಣ್ಣಿನ ಘರಯಿ ರೆಡಿ 

ಹಲಸಿನ ಹಣ್ಣು ತುಂಬಾ ಸಿಹಿಯಿತ್ತು. ಆದ್ದರಿಂದ ಬೆಲ್ಲ ಸ್ವಲ್ಪವೇ ಹಾಕಿದೆ. ನೀವು ರುಚಿಗೆ ತಕ್ಕ ಹಾಗೆ ಬೆಲ್ಲ ಹಾಕಿ . 
ಎಂಜಾಯ್ 

Tuesday, February 10, 2015

ವಲ್ ವಲ್ / ತರಕಾರಿ ಕಾಯಿ ರಸ

ನಮ್ಮ ಮನೆಯಲ್ಲಿ ಈ ತಣ್ಣಗಿನ ಪದಾರ್ಥ  hot favorite. ನಿಮಗೆ ಬೇಕಾದ ತರಕಾರಿ ಬಳಸಬಹುದು. 
ಸಾಧಾರಣವಾಗಿ ಚೌತಿ ಹಬ್ಬದ ನಂತರ ಈ ವಲ್ ವಲ್ ಮಾಡುತ್ತಾರೆ ನಮ್ಮಲ್ಲಿ. ಚೌತಿಗೆ ಗಣಪ ಇರಿಸುವವರು, ಮಂಟಪದಲ್ಲಿ ಆ ಕಾಲಕ್ಕೆ ಸಿಗುವ ತರಕಾರಿ ಹಣ್ಣು ಹಂಪಲುಗಳನ್ನು ’ಫಲಾವಳಿ’ ಅಂತ ನೇತು ಹಾಕುತ್ತಾರೆ. ಅದಕ್ಕೆ ಸೂಜಿ ದಾರದ ಉಪಯೋಗ ಮಾಡುತ್ತಾರಾದ್ದರಿಂದ ಅದು ತುಂಬ ಸಮಯ ಇಡಲಾಗುವುದಿಲ್ಲ. ನಾಲ್ಕಾಲ್ಕೆ ತರಕಾರಿ ಗಳನ್ನು ಈ ಫಲಾವಳಿಯಲ್ಲಿ ಉಪಯೋಗಿಸ್ತಾರೆ ಆದ್ದರಿಂದ, ಆ ತರ್ಕಾರಿಗಳ ಮಿಶ್ರ ಅಡುಗೆಯನ್ನು ( ಅವನ್ನು ಬೇಗ ಖಾಲಿಮಾಡಲೋಸುಗ) ವಲ್ ವಲ್ ಅಥವ ಗಜಬಜೆ (ಅದು ಬೇರೆ ಪೋಸ್ಟ್ ನಲ್ಲಿ ಹಾಕ್ತೇನೆ) ಮಾಡುವ ಪರಿಪಾಠ. ನಮ್ಮ ಮನೆಯಲ್ಲಿ ಫ್ರಿಜ್ ನಲ್ಲಿ ಅಲ್ಪ ಸ್ವಲ್ಪ ಉಳಿದ ತರಕಾರಿಯಿದ್ದರೆ ನಾನು ಗಜಬಜೆ ಗಿಂತ ಹೆಚ್ಚು ವಲ್ ವಲ್ ಇಷ್ಟ ಆದ್ದರಿಂದ ಅದನ್ನೇ ಮಾಡುತ್ತೇನೆ.
ಒಬ್ಬ ಪರಿಚಯದವರು ನಮ್ಮ ಮನೆಗೆ ವಲ್ ವಲ್ ಮಾಡಿದಾಗ ಬಂದಿದ್ದರು. ಹೆಚ್ಚಿನದಾಗಿ ಕಾಯಿ ರಸ ಹಾಕಿ ಮಾಡಿದ ಪದಾರ್ಥ ಎಲ್ಲರಿಗೂ ಇಷ್ಟ. ಊಟಕ್ಕೆ ಅವರಿಗೆ ಔತಣ ಕೊಟ್ಟಿದ್ದರಿಂದ ವಲ್ ವಲ್ ಹಾಗೂ ಇತರೇ ಅಡಿಗೆಗಳೂ ಇದ್ದವು. ಅವರು ವಲ್ ವಲ್ ಒಂದು ಬಿಟ್ಟು ಎಲ್ಲ ಬಡಿಸಿ ಎಂದಾಗ, ಅಡಿಗೆ ಮನೆಯಲ್ಲಿ ಬಾಳಕಾ (ಮಜ್ಜಿಗೆಯಲ್ಲಿ ಅದ್ದಿ ಒಣಗಿಸಿದ ಹಸಿಮೆಣಸು) ಎಣ್ಣೆಯಲ್ಲಿ ಕರಿಯುತ್ತಿದ್ದವಳು..ವ್ಹಾssssಟ್ how can anybody not love ವಲ್ ವಲ್ ಅಂತ ಛಾವಣಿ ಕಡೆ (rolling her eyes) ನೋಡ್ತಾ ಇದ್ದಳು.
ಅವರಿಗೆ ನಾನು ಕುಶಾಲಿನಲ್ಲಿ ಯಾಕಿಷ್ಟ ಇಲ್ಲ ಅಂತ ಕೇಳಿದೆ. ಅದಕ್ಕೆ ಅವರು ...’ಮಾಯಿ, ಊರಲ್ಲಿ ನಮಗಿರೋದು ತರಕಾರಿ ಅಂಗಡಿ. ಅರ್ಧ ಕೊಳೆತ ತರಕಾರಿಯಲ್ಲಿನ ಒಳ್ಳೆಯ ಭಾಗ ತೆಗೆದು ನಮ್ಮ ಮನೆಯಲ್ಲಿ ದಿನಾ ವಲ್ ವಲ್ ಮಾಡ್ತಾರೆ. ತಿಂದು ತಿಂದು ಬೇಜಾರ್ ಆಗಿದೆ. ನನಗೆ ದಾಳಿತೊವ್ವೆ ಒಂದಿದ್ದರೆ ಸಾಕಪ್ಪ’ ಅಂತ ಹೇಳಿದರು :-)
ನಾನು ಇದರಲ್ಲಿ: ಬೀನ್ಸ್, ಕ್ಯಾರೆಟ್, ಸೌತೆಕಾಯಿ, ತೊಂಡೆಕಾಯಿ, ಬಾಳೆಕಾಯಿ, ದಪ್ಪಮೆಣಸು ಸೇರಿಸಿದ್ದೇನೆ.

ಬೇಕಾಗಿರುವುದು: ನಿಮಗೆ ಬೇಕಾದ ನಾಲ್ಕೈದು ತರಕಾರಿಗಳು, ನಾಲ್ಕೈದು ಹಸಿಮೆಣಸಿನಕಾಯಿ, ಒಂದು ತೆಂಗಿನಕಾಯಿ (ಹೆರೆದು ಹಾಲು ತೆಗೆದಿಟ್ಟುಕೊಳ್ಳಿ), ಒಗ್ಗರಣೆಗೆ ಎಣ್ಣೆ, ಸಾಸಿವೆ, ಜೀರಿಗೆ, ಕೆಂಪು ಒಣ ಮೆಣಸು, ಉಪ್ಪು, ಒಂದು ಚಮಚ ಅಕ್ಕಿ ಹಿಟ್ಟು
ತರಕಾರಿಗಳಿಗೆ ಸ್ವಲ್ಪ ನೀರು ಸೇರಿಸಿ, ಸೀಳಿದ ಹಸಿಮೆಣಸಿನಕಾಯಿ, ಉಪ್ಪು ಬೆರೆಸಿ ಕುಕ್ಕರ್ ನಲ್ಲಿ ಎರಡು ಸೀಟಿ ಕೂಗಿಸಿ ಆಫ್ ಮಾಡಿ.
ತಣ್ಣಗಾದ ಮೇಲೆ ಒಂದು ಕುದಿ ಬರುವಷ್ಟು ಬಿಸಿ ಮಾಡಿ. ಅರ್ಧ ಗ್ಲಾಸ್ ನೀರಿನಲ್ಲಿ ಅಕ್ಕಿ ಹಿಟ್ಟನ್ನು ಗಂಟು ಬರದಂತೆ ಕದಡಿಸಿ. ಅದನ್ನು ಕುದಿ ಬರುತ್ತಿರುವಾಗ ಬೆರೆಸಿ ಬಿಡಿ. ಒಗ್ಗರಣೆ ಹಾಕಿ. (ತೆಂಗಿನಹಾಲು ಮತ್ತು ಬೆಂದ ತರಕಾರಿಗಳನ್ನು ಹಿಡಿದಿಟ್ಟುಕೊಳ್ಳುವುದು ಅಕ್ಕಿ ಹಿಟ್ಟಿನ ಕಾರ್ಯ.) ಊಟಕ್ಕೆ ಬಡಿಸುವ ಮುನ್ನ ತೆಂಗಿನ ಹಾಲು ಬೆರೆಸಿ ಸ್ವಲ್ಪ ಬಿಸಿ ಮಾಡಿ. 
ವಲ್ ವಲ್ ತಯಾರು. 
ಸೂಪ್ ತರಹ ಹಾಗೆ ಸೇವಿಸಬಹುದು, ಅಥವಾ ಅನ್ನ ಕ್ಕೆ ಸಾಥ್...ಎರಡೂ ಟೇಸ್ಟಿ. ಎರಡು ತುತ್ತು ಹೆಚ್ಚು ಉಂಡರೂ (ಹೆವಿ )ಭಾರ ಅನಿಸಲ್ಲ. 


ಅನ್ನ, ವಲ್ ವಲ್ ಮತ್ತು ಕೋಕಂ (ಸೋಲ್ ಕಡಿ)
ನಾನು ವೀಕ್ ಡೇ ನಲ್ಲಿ ಇದನ್ನು ತಯಾರಿಸಿದರೆ, ನನ್ನ ಸಣ್ಣ ಮಗಳು ’momee you should prepare this on my day off (ಭಾನುವಾರ ಆಕೆಗೆ ರಜೆ), ಆಗ ಆರಾಮಾಗಿ ಎಂಜಾಯಿಸುತ್ತ ಊಟ ಮಾಡಬಹುದ” ಅಂತ. 
ವಲ್ ವಲ್ ಗೆ ಸುವರ್ಣಗೆಡ್ಡೆ, ಅಲಸಂದೆ, ಹೀರೆಕಾಯಿ, ಆಲೂಗಡ್ಡೆ ಕೂಡ ಬೆರೆಸಬಹುದು.
:-)

Sunday, January 11, 2015

ಮಿಸ್ಸಳ್ ಭಾಜಿ

 . ಇದು ಮಹಾರಾಷ್ಟ್ರದ ಜನಪ್ರಿಯ ತಿಂಡಿ. ಇಲ್ಲಿ ನಾನು ಹೇಳಿಕೊಡ್ತಾ ಇರುವುದು ಕೊಲ್ಹಾಪುರಿ ಮಿಸ್ಸಳ್. ನಾನು ಮುಂಬೈನಲ್ಲಿ ಬೆಳೆದರೂ ನನಗೆ ಕೊಲ್ಹಾಪುರಿ ಮಿಸ್ಸಳ್ ಹೆಚ್ಚು ಇಷ್ಟ. ನಿಮಗೆ ಬೇಕಾದ ಹಾಗೆ ಖಾರ ಬಳಸಬಹುದು. ನಮಗೆ ತುಂಬಾ ಖಾರ ಇಷ್ಟ.
ಬೇಕಾಗಿರುವುದು ಎರಡು ಮುಷ್ಠಿ ಮೊಳಕೆ ಬರಿಸಿದ ಕಾಳು (ಮಟಕಿ, ಹೆಸರು ಕಾಳು) ಸ್ವಲ್ಪ  ಮಸೂರ್ ಕಾಳು, ಒಂದು ಬೇಯಿಸಿದ ಆಲೂಗಡ್ಡೆ.
ಮಸಾಲೆಗೆ:
ಒಂದು ಟೇಬಲ್ ಸ್ಪೂನ್ ತುರಿದ ಕೊಬ್ಬರಿ, ೪-೫ ಕೆಂಪು ಮೆಣಸು, ಹುಣಸೆ ಹುಳಿ, ಅರ್ಧ ಇಂಚ್ ಚಕ್ಕೆ, ೮-೧೦ ಬೆಳ್ಳುಳ್ಳಿ ಎಸಳು, ಒಂದು ಟೀ ಸ್ಪೂನ್ ಗೋಡಾ ಮಸಾಲಾ, ಒಂದು ಟೀ ಸ್ಪೂನ್ ತಿಕಟ್ ಮಸಾಲಾ. (ಗೋಡಾ ಮಸಾಲಾ, ತಿಕಟ್ ಮಸಾಲಾ ನಾನು ಬೆಳಗಾವಿಯಿಂದ ತರುತ್ತೇನೆ. ಅಲ್ಲಿನ ಮಾರ್ಕೆಟ್ ನಲ್ಲಿ ಲಭ್ಯ)
ಎಣ್ಣೆಯಲ್ಲಿ ಮೊದಲು ಚಕ್ಕೆ ಹಾಕಿ ಆಮೇಲೆ  ಕೊಬ್ಬರಿಯನ್ನು ಕೆಂಪು ಬಣ್ಣ ಬರುವ ತನಕ ಫ್ರೈ ಮಾಡಿ. ತಣ್ಣಗಾದ ಮೇಲೆ ಉಳಿದ ಪದಾರ್ಥ ಸೇರಿಸಿ ನುಣ್ಣಗೆ ರುಬ್ಬುವುದು.
ಬೆರೆಸಲು ಕೊತ್ತಂಬರಿ ಸೊಪ್ಪು, ಮಿಕ್ಸರ್, ಹಸಿ ನೀರುಳ್ಳಿ (ಚಿಕ್ಕದಾಗಿ ಕತ್ತರಿಸಿದ್ದು)
ಕಾಳುಗಳನ್ನು ಸ್ವಲ್ಪ ನೀರುಳ್ಳಿ ಹಾಕಿ ಬೇಯಿಸಿ.
ಎಣ್ಣೆ ಬಿಸಿ ಮಾಡಿ ಜೀರಿಗೆ ಒಗ್ಗರಣೆಗೆ ಇಡಿ. ಮಸಾಲೆ ಬೆರೆಸಿ ಕೈಯಾಡಿಸಿ. ಬೇಕಾದರೆ ಟೊಮ್ಯಾಟೊ ಬೆರೆಸಿ. ಬೇಯಿಸಿದ ಆಲೂಗಡ್ಡೆ + ಕಾಳು ಬೆರೆಸಿ. ಉಪ್ಪು ಹಾಕಿ. ಬೇಕಾದಷ್ಟು ನೀರು ಬೆರೆಸಿ ಚೆನ್ನಾಗಿ ಕುದಿಸಿ. ಕುದಿ ಬಂದ ಮೇಲೆ ಆಫ್ ಮಾಡಿ ಕೊತ್ತಂಬರಿ ಸೊಪ್ಪು ಬೆರೆಸಿ. ಭಾಜಿ ರೆಡಿ
ಸರ್ವ್ ಮಾಡುವಾಗ ಬವ್ಲ್ ನಲ್ಲಿ ಭಾಜಿ ಹಾಕಿ ಅದರ ಮೇಲೆ ಮಿಕ್ಸರ್, ಕತ್ತರಿಸಿದ ನೀರುಳ್ಳಿ ಹಾಕಿ ಕೊಡಿ. ಮಿಸ್ಸಳ್ ರೆಡಿ. ಪಾವ್ ಜತೆ ಸರ್ವ್ ಮಾಡಿ

Monday, January 5, 2015

ಬೆಳ್ಳುಳ್ಳಿ ಆಲೂಗಡ್ಡೆ



ಬೇಕಾಗಿರುವುದು ಬೇಯಿಸಿದ ಆಲುಗಡ್ಡೆ...ಇವನ್ನು ಚಚೌಕವಾಗಿ ಕತ್ತರಿಸಿಡಿ
ಮಸಾಲೆಗೆ: 8-10 (ಅಥವಾ ನಿಮಗೆ ಖಾರ ಬೇಕಾದಷ್ಟು) ಕೆಂಪು ಮೆಣಸು,ಗೋಲಿ ಗಾತ್ರದ ಹುಣಸೆ ಹುಳಿ, 18-20 ಸಿಪ್ಪೆ ತೆಗೆದ ಬೆಳ್ಳುಳ್ಳಿ, ಉಪ್ಪು.....ಇವೆಲ್ಲವನ್ನೂ ಸ್ವಲ್ಪವೇ ನೀರಲ್ಲಿ ನುಣ್ಣಗೆ ರುಬ್ಬಿ.
ಕತ್ತರಿಸಿಟ್ಟ ಆಲೂಗಡ್ಡೆ ಈ ಮಸಾಲೆ  ಬೆರೆಸಿಡಿ. 5-10 ನಿಮಿಷ ಬಿಟ್ಟು, ಕಾದ ಎಣ್ಣೆಗೆ ಸಾಸಿವೆ ಹಾಕಿ ಸಿಡಿಸಿ. ನಂತರ ಮಸಾಲೆ ಹೆಚ್ಚಿಟ್ಟ ಆಲೂಗಳನ್ನು ಹಾಕಿ ಸಣ್ಣ ಉರಿಯಲ್ಲಿ ೧೦ ನಿಮಿಷ ಇಡಿ. ಬೆಳ್ಳುಳ್ಳಿ ಆಲೂ ರೆಡಿ. ಚಪಾತಿಗೆ ಒಳ್ಳೆ ಕಾಂಬಿನೇಶನ್.

:-)
ಎಂಜಾಯ್